Home ಟಾಪ್ ಸುದ್ದಿಗಳು ಮೋದಿ ಇನ್ನು ಐದು ವರ್ಷ ಆಡಳಿತ ನಡೆಸಿದರೂ ನೆಹರು, ಇಂದಿರಾ ದಾಖಲೆ ಸ್ಥಿರ

ಮೋದಿ ಇನ್ನು ಐದು ವರ್ಷ ಆಡಳಿತ ನಡೆಸಿದರೂ ನೆಹರು, ಇಂದಿರಾ ದಾಖಲೆ ಸ್ಥಿರ

ನವದೆಹಲಿ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಅವರ ಮಗಳು ಇಂದಿರಾ ಗಾಂಧಿಯ ನಂತರ ಅತಿ ಹೆಚ್ಚು ಕಾಲ ಪ್ರಧಾನಿಯಾದ ಕೀರ್ತಿಗೆ ಮೋದಿ ಪಾತ್ರವಾಗಲಿದ್ದಾರೆ. ಆದರೆ ಮೋದಿ ಇನ್ನು ಐದು ವರ್ಷ ಪೂರ್ತಿ ಅಧಿಕಾರದಲ್ಲಿದ್ದರೂ ನೆಹರು, ಇಂದಿರಾ ದಾಖಲೆ ಮುರಿಯುವುದಿಲ್ಲ. ಅದರ ಬಗ್ಗೆಗಿನ ಮಾಹಿತಿ ಹೀಗಿದೆ.

ಜವಾಹರ್ ಲಾಲ್ ನೆಹರು

ಜವಾಹರಲಾಲ್ ನೆಹರು ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಿಟಿಷ್ ಆಡಳಿತ ಅಂತ್ಯವಾದ ನಂತರ ಜವಾಹರಲಾಲ್ ನೆಹರು ಹಂಗಾಮಿ ಪ್ರಧಾನಿಯಾಗಿದ್ದರು. ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿದ ನಂತರ ಅವರು 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆಯುವವರೆಗೂ ಹಂಗಾಮಿ ಪ್ರಧಾನಿಯಾಗಿ ಮುಂದುವರೆದರು. ಅದರ ನಂತರ, ಅವರು ಸ್ವತಂತ್ರ ಭಾರತದಲ್ಲಿ ಮೊದಲ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೊದಲ ಪ್ರಧಾನಿಯಾಗಿ ಆಯ್ಕೆಯಾದರು. ಆ ಬಳಿಕ ಸತತ ಗೆಲುವನ್ನು ಮುಂದುವರಿಸಿದರು. ಒಟ್ಟು 16 ವರ್ಷ 286 ದಿನಗಳ ಕಾಲ ಪ್ರಧಾನಿಯಾಗಿ ಅವರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.

ಇಂದಿರಾ ಗಾಂಧಿ

ಜವಾಹರಲಾಲ್ ನೆಹರೂ ನಂತರ ಅವರ ಪುತ್ರಿ ಇಂದಿರಾ ಗಾಂಧಿ ದೇಶದ ಎರಡನೇ ಪ್ರಧಾನಿಯಾದರು. ನೆಹರೂ ನಂತರ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಇಂದಿರಾ ಗಾಂಧಿ ಈಗಲೂ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿರಾಗಾಂಧಿ ಅವರು ಒಟ್ಟು 15 ವರ್ಷ 350 ದಿನಗಳ ಕಾಲ ನಮ್ಮ ದೇಶದ ಪ್ರಧಾನಿಯಾಗಿದ್ದರು.

ನರೇಂದ್ರ ಮೋದಿ

ಯುಪಿಎ ಆಡಳಿತಾವಧಿಯಲ್ಲಿ ಸತತ ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನಿರ್ಗಮಿಸಿದ ನಂತರ ಪ್ರಧಾನಿಯಾಗಿ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷ ಮತ್ತು ಕೆಲವು ದಿನಗಳಾಗಿವೆ. ನರೇಂದ್ರ ಮೋದಿ 3ನೇ ಅವಧಿಯಲ್ಲಿ ಸಂಪೂರ್ಣ 5 ವರ್ಷಗಳ ಕಾಲ ಪ್ರಧಾನಿಯಾಗಿ ಮುಂದುವರಿದರೂ ಇಂದಿರಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರನ್ನು ಮೀರಿಸಲು ಸಾಧ್ಯವಿಲ್ಲ. ಏಕೆಂದರೆ 2029ರ ಚುನಾವಣೆಯವರೆಗೂ ಅವರು ಪ್ರಧಾನಿಯಾಗಿ ಮುಂದುವರಿದರೂ 15 ವರ್ಷಕ್ಕೂ ಹೆಚ್ಚು ಸಮಯವಾಗುತ್ತದೆ ಅಷ್ಟೆ. ಆದರೆ 2029ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಮಾತ್ರ‌ ಈ ದಾಖಲೆಗಳು ಅಳಿಸಿ ಹೋಗುತ್ತವೆ.

ಮನಮೋಹನ್ ಸಿಂಗ್ 10 ವರ್ಷ 4 ದಿನಗಳ ಕಾಲ ಪ್ರಧಾನಿಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ 6 ವರ್ಷ 80 ದಿನಗಳು. ರಾಜೀವ್ ಗಾಂಧಿ 5 ವರ್ಷ 32 ದಿನಗಳು. ಪಿ.ವಿ.ನರಸಿಂಹರಾವ್ 4 ವರ್ಷ 330 ದಿನಗಳು. ಮೊರಾರ್ಜಿ ದೇಸಾಯಿ 2 ವರ್ಷ 126 ದಿನಗಳು ಪ್ರಧಾನಿಯಾಗಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಒಂದು ವರ್ಷದಲ್ಲಿ 216 ದಿನಗಳು, ವಿಶ್ವನಾಥ್ ಪ್ರತಾಪ್ ಸಿಂಗ್ (ವಿಪಿ ಸಿಂಗ್) 343 ದಿನಗಳು, ಹೆಚ್ ಡಿ ದೇವೇಗೌಡರು 324 ದಿನಗಳು, ಐಕೆ ಗುಜ್ರಾಲ್ 332 ದಿನಗಳು, ಚಂದ್ರಶೇಖರ್ 223 ದಿನಗಳು ಮತ್ತು ಚರಣ್ ಸಿಂಗ್ 170 ದಿನಗಳ ಕಾಲ ಈ ದೇಶದ ಪ್ರಧಾನಿ ಆಗಿ ಸಲ್ಲಿಸಿದ್ದಾರೆ.

Join Whatsapp
Exit mobile version