ಮೈಸೂರು: “ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನನ್ನ ನಂಬಿಕೆ. ನನಗೆ ಏನೇನು ಬೇಕೋ ಅದನ್ನು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಆಷಾಢ ಮಾಸದ ಎರಡನೇ ಶುಕ್ರವಾರದ ಹಿನ್ನೆಲೆ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ವೇಳೆ ನೀವು ಸಿಎಂ ರೇಸ್ನಿಂದ ಹೊರಬಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ, “ಯಾವ ಚರ್ಚೆನೂ ಬೇಡ ಈಗ, ಇಲ್ಲಿಗೆ ರಾಜಕೀಯ ಮಾತನಾಡಲು ಬಂದಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಲಿ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರು ನಮ್ಮೆಲ್ಲರಿಗೂ ಬುದ್ಧಿವಾದ ಹೇಳಿದ್ದಾರೆ ಮತ್ತು ಸಂದೇಶ ನೀಡಿದ್ದಾರೆ. ಅವರ ಮಾತಿನಂತೆ ನಡೆದುಕೊಂಡು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ” ಎಂದು ಹೇಳಿದರು.
“ಎಲ್ಲರ ದುಃಖ ದೂರ ಮಾಡುವ ತಾಯಿ ಚಾಮುಂಡಿ. ಈ ಬಾರಿ ರಾಜ್ಯಕ್ಕೆ ಸಮೃದ್ಧಿಯಾಗಿ ಮಳೆ, ಬೆಳೆ, ನೆಮ್ಮದಿ ಶಾಂತಿಯನ್ನು ತಾಯಿ ನೀಡುತ್ತಿದ್ದಾಳೆ. ನಾನು ನನ್ನ ಕುಟುಂಬ ಸಮೇತ ಬಂದು ತಾಯಿಯ ದರ್ಶನ ಮಾಡಿ, ನನಗೆ, ನನ್ನ ಕುಟುಂಬಕ್ಕೆ, ನಿಮಗೆ ಶುಭವಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದರು.