ಇಥಿಯೊಪಿಯದಲ್ಲಿ ಆಂತರಿಕ ಕಲಹ | ಟೈಗ್ರೆ ಸಮೀಪದ ಎರಡು ನಗರಗಳ ಮೇಲೆ ರಾಕೆಟ್ ದಾಳಿ

Prasthutha|

ಅಡ್ಡಿಸ್ ಅಬಾಬ: ಉತ್ತರ ಟೈಗ್ರೆ ಪ್ರದೇಶದಲ್ಲಿನ ಸ್ಥಳೀಯ ಆಡಳಿತಾರೂಢ ಪಕ್ಷದ ಬೆಂಬಲಿಗರು, ಪಕ್ಕದ ಅಮ್ಹಾರ ರಾಜ್ಯದ ಎರಡು ವಿಮಾನ ನಿಲ್ದಾಣಗಳ ಮೇಲೆ ರಾಕೆಟ್ ದಾಳಿ ಮಾಡಿದ್ದಾರೆ ಎಂದು ಇಥಿಯೋಪಿಯ ಸರಕಾರ ಆರೋಪಿಸಿದೆ. ಈ ಬೆಳವಣಿಗೆ ದೇಶದ ಇತರ ಭಾಗಗಳಿಗೂ ಹರಡುವ ಸಾಧ್ಯತೆಯಿದೆ ಎಂದು ಸರಕಾರ ಕಳವಳ ವ್ಯಕ್ತಪಡಿಸಿದೆ.

“ಶುಕ್ರವಾರ ತಡರಾತ್ರಿ ವೇಳೆ ಬಾಹಿರ್ ದರ್ ಮತ್ತು ಗೊಂಡರ್ ನಗರಗಳತ್ತ ರಾಕೆಟ್ ದಾಳಿ ನಡೆದಿದೆ. ಇದರ ಪರಿಣಾಮವಾಗಿ, ವಿಮಾನ ನಿಲ್ದಾಣದ ಭಾಗದಲ್ಲಿ ಹಾನಿಯಾಗಿದೆ’’ ಎಂದು ಸರಕಾರ ಹೇಳಿದೆ. ಟೈಗ್ರೆ ಪೀಪಲ್ಸ್ ಲಿಬರೇಶನ್ ಫ್ರಂಟ್ (ಟಿಪಿಎಲ್ ಎಫ್) ತನ್ನ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸರಕಾರ ತಿಳಿಸಿದೆ.

- Advertisement -

ಇಥಿಯೋಪಿಯ ಪ್ರಧಾನಿ ಅಭಿಯ್ ಅಹಮದ್ ಕಳೆದ ವಾರದಿಂದ ಟಿಪಿಎಲ್ ಎಫ್ ವಿರುದ್ಧ ಸೇನಾ ಕಾರ್ಯಾಚರಣೆಗೆ ಕರೆ ನೀಡಿದ್ದಾರೆ. ಸ್ಥಳೀಯ ಆಡಳಿತಗಾರರು ಸೇನಾ ನೆಲೆಗಳಿಗೆ ದಾಳಿ ನಡೆಸುತ್ತಿದ್ದಾರೆ ಎಂದು ಆಪಾದಿಸಿ, ಈ ಸೇನಾ ಕಾರ್ಯಾಚರಣೆಗೆ ಆದೇಶಿಸಲಾಗಿದೆ. ದೇಶದೊಳಗೆ ಆಂತರಿಕ ಕಲಹ ಆರಂಭಗೊಂಡಿರುವುದರಿಂದ, ಸುಮಾರು 10,000ಕ್ಕೂ ಅಧಿಕ ಮಂದಿ ಈಗಾಗಲೇ ನೆರೆಯ ಸುಡಾನ್ ಗೆ ವಲಸೆ ಹೋಗಿದ್ದಾರೆ.

ಟೈಗ್ರೆಯಲ್ಲಿ ಸ್ಥಳೀಯ ಪಡೆಗಳನ್ನು ಸೋಲಿಸಿರುವುದಾಗಿ ಪ್ರಧಾನಿ ಅಹಮದ್ ಘೋಷಿಸಿದ ಬಳಿಕ, ಪ್ರದೇಶದಲ್ಲಿ ಸಾಮೂಹಿಕ ಹತ್ಯೆಗಳಾಗಿರುವ ಬಗ್ಗೆ ತನಿಖೆ ನಡೆಸಲು ದೇಶದ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ. ಕಳೆದ ಎರಡು ವಾರಗಳಲ್ಲಿ ಇಥಿಯೊಪಿಯದ ಕೇಂದ್ರ ಸರಕಾರ ಮತ್ತು ಟೈಗ್ರೆಯ ಪ್ರಾದೇಶಿಕ ಆಡಳಿತಗಾರರ ನಡುವಿನ ಹಿಂಸಾತ್ಮಕ ತಿಕ್ಕಾಟದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆಯಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ.  

- Advertisement -