ಶಿರಸಿ: ಯುಪಿಯ ಸರ್ಕಾರದಲ್ಲಿ ಉಳುವವನೆ ಭೂಮಿಯ ಒಡೆಯ ನೀತಿಗಳಿದ್ವು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಉಳ್ಳವರು ಮಾತ್ರ ಭೂಮಿಯ ಒಡೆಯರು ಎಂಬ ನೀತಿಗಳು ಬಂದಿವೆ. ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ, ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನ ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಅವರು ಶಿರಸಿ ಹಾಗೂ ಕಾರವಾರದಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ, ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನು ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ. ಅರಣ್ಯವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡದೆ, ಯುಪಿಎ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಂದಂತಹ ಕ್ರಾಂತಿಕಾರಿಕ ಅರಣ್ಯ ಹಕ್ಕು ಕಾಯ್ದೆಗಳನ್ನ ದುರ್ಬಲಗೊಳಿಸಲಾಗಿದೆ ಎಂದು ಕಿಡಿಕಾರಿದರು.
2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಬಡ ಜನರಿಗೆ, ಅರಣ್ಯವಾಸಿಗಳಿಗೆ, ಬುಡಕಟ್ಟು ಸಮುದಾಯಗಳಿಗೆ ಭೂಮಿಯ ಹಕ್ಕನ್ನು ಹೊಂದುವ ಹಕ್ಕಿದೆ. ಯುಪಿಎ ಕಾಂಗ್ರೆಸ್ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಫ್’ಆರ್ಎ(ಅರಣ್ಯ ಹಕ್ಕು ಕಾಯ್ದೆ)ಯನ್ನು ಜಾರಿಗೆ ತರಲಾಗಿತ್ತು. ಆದಿವಾಸಿಗಳು ಮತ್ತು 75 ವರ್ಷಗಳಿಗಿಂತ ಹೆಚ್ಚು ಅಥವಾ ಮೂರು ತಲೆಮಾರಿಗಿಂತ ಹೆಚ್ಚು ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಬುಡಕಟ್ಟುಯೇತರ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಈ ಕಾಯ್ದೆ ಎತ್ತಿಹಿಡಿದಿದೆ. ಆದರೆ ಮೋದಿ ಸರ್ಕಾರ ಕಾಯ್ದೆಗಳನ್ನ ತಿದ್ದುಪಡಿ ಮಾಡಿ, ದುರ್ಬಳಗೊಳಿಸುವ ಮೂಲಕ ಬಾಬಾ ರಾಮದೇವ್, ಅದಾನಿ, ಅಂಬಾನಿಯಂತವರಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನ ನೀಡಿದೆ ಎಂದು ಆರೋಪಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಅರಣ್ಯಭೂಮಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಾರಿ ಅಧಿವೇಶನದಲ್ಲಿ ಅರಣ್ಯ ಭೂ ಒತ್ತುವಳಿದಾರರ ಸಮಸ್ಯೆಯನ್ನು ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಬಂದರೆ ವಿಶೇಷವಾಗಿ ಈ ಭಾಗದ ಜನರಿಗೆ ನ್ಯಾಯ ದೊರಕಿಸುವ, ಹಕ್ಕುಗಳನ್ನ ನೀಡುವ ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದರು.
‘ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಿರುವ ಪಕ್ಷ. ಉಗ್ರ ಚಟುವಟಿಕೆ ಎಂದಿಗೂ ಬೆಂಬಲಿಸಿಲ್ಲ’.ದೇಶದ್ರೋಹಿಗಳ ವಿರುದ್ಧ ಹೋರಾಡಿದ್ದಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಕಳೆದುಕೊಂಡೆವು. ಭಯೋತ್ಪಾದನೆ ವಿರುದ್ದ ಹೋರಾಡಿದ್ದಕ್ಕಾಗಿಯೇ ಇಂದಿರಾ ಗಾಂಧಿ ಹಾಗೂ ಐಕ್ಯತೆಗಾಗಿ ರಾಜೀವ್ ಗಾಂಧಿ ಜೀವ ತೆತ್ತಿದ್ದಾರೆ. ಆದರೂ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಹರಿಪ್ರಸಾದ್ ಹೇಳಿದರು.
ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ. ಕಂದಹಾರ ವಿಮಾನ ಅಪಹರಣದಲ್ಲಿ ನಡೆದ ಭಯೋತ್ಪಾದನಾ ಘಟನೆಯ ಆರೋಪಿಗೆ ಎಲ್ ಕೆ ಅಡ್ವಾಣಿ ಕ್ಲೀನ್ ಚೀಟ್ ನೀಡಿದ್ರು. ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರೂ ಎಂದು ದೇಶದ ಜನ ಮರೆತಿಲ್ಲ. ಪೊಲೀಸರ ತನಿಖೆಗೂ ಮೊದಲೇ ನಾಗಪುರ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಬರುತ್ತೆ. ಮಂಗಳೂರು ಪೊಲೀಸರು ಘಟನೆಗೆ ಬಗ್ಗೆ ತನಿಖೆಯೇ ಪ್ರಾರಂಭ ಮಾಡಿರಲಿಲ್ಲ, ಆಗಲೇ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಬ್ಯಾನ್ ಮಾಡಲು ಈಶ್ವರಪ್ಪನವರ ವಂಶಪೂರ್ತಿ ಹತ್ತು ಸಲ ಹುಟ್ಟಿದ್ರೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಜನರು ಕಟ್ಟಿರುವಂತದ್ದು, ನಾಗಪುರದವರಲ್ಲ. ನಾಯಕರ ಆಪರೇಷನ್ ಕಾಂಗ್ರೆಸ್ ಪಕ್ಷ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಒಪ್ಪಿ ಯಾರಾದರೂ ಬರಬಹುದು. ಕಳ್ಳತನದಿಂದ ಬಿಜೆಪಿಯವರು ಶಾಸಕರನ್ನ ಕದ್ದು ಹೋಗಿದ್ದು. ಈಗ ಅವರಿಗೆ ಭ್ರಮನಿರಸನವಾಗಿ ವಾಪಸ್ ಬರುತ್ತಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಕರ್ನಾಟಕಕಕ್ಕೆ ವಿಶ್ವಗುರು, ಸುಳ್ಳಿನ ಸರದಾರ ನರೇಂದ್ರ ಮೋದಿ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತೆ. ಗಡಿಪಾರದ ಗೃಹ ಸಚಿವ ಅಮಿತ್ ಶಾ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ.ಬಿಜೆಪಿಯವರು ಗುಜರಾತ್ ಮಾದರಿಯೇ ಚುನಾವಣೆ ಎದುರಿಸಲಿ,ನಾವು ಸಿದ್ದರಾಗಿದ್ದೇವೆ ಎಂದು ಹರಿಪ್ರಸಾದ್ ಹೇಳಿದರು.