ಕಾವೂರು: ಬಿಜೆಪಿಯ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಝಾನ್ ಹಾಗೂ ಅಲ್ಲಾಹುವಿನ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಎಸ್.ಡಿ.ಪಿ.ಐ ಕಾವೂರು ಬ್ಲಾಕ್ ಸಮಿತಿ ವತಿಯಿಂದ ಕಾವೂರು ಜಂಕ್ಷನ್’ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ನೇತೃತ್ವವನ್ನು ಕಾವೂರು ಬ್ಲಾಕ್ ಅಧ್ಯಕ್ಷ ಹನೀಫ್ ಕಾವೂರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ಯಾಸೀನ್ ಆರ್ಕುಳ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಕ್ಷೇತ್ರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದು ಸೋಲುವ ಭೀತಿಯಲ್ಲಿ ಹರಕಲು ಬಾಯಿಯ ಈಶ್ವರಪ್ಪರಿಂದ ವಿವಾದಾತ್ಮಕ ಹೇಳಿಕೆಯನ್ನು ಕೊಡಿಸಿ ಭಾವನಾತ್ಮಕವಾಗಿ ಗೆಲ್ಲಲು ಹೊರಟಿದ್ದಾರೆ. ಬಿ.ಜೆ.ಪಿ.ಯ ಈ ಕುತಂತ್ರ ರಾಜಕೀಯವನ್ನು ಈ ಕ್ಷೇತ್ರದ ಶಾಂತಿ ಬಯಸುವ ಜನತೆಯು ಖಂಡಿತಾ ಸೋಲಿಸಲಿದ್ದಾರೆ ಎಂದು ಹೇಳಿದರು.
ಮೂಡಬಿದರೆ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, ಈಶ್ವರಪ್ಪ ಪಕ್ಷದೊಳಗೆ ಬೆಪ್ಪನಾಗಿದ್ದಾನೆ. ಭ್ರಷ್ಟಾಚಾರ, 40 ಪರ್ಸಂಟ್ ಕಮಿಷನ್ , ಗುತ್ತಿಗೆದಾರ ಪಾಟೀಲ್ ಅತ್ಮಹತ್ಯೆ ಆರೋಪದಿಂದ ಮಂತ್ರಿ ಹುದ್ದೆಯನ್ನು ಕೂಡ ಕಳಕೊಂಡ ಈಶ್ವರಪ್ಪ, ತನ್ನನ್ನು ಪಕ್ಷದೊಳಗೆ ಗುರುತಿಸಲು ವಿವಾದಾತ್ಮಕ ಹೇಳಿಕೆ ಮೂಲಕ ಬಿ.ಜೆ.ಪಿ.ಯನ್ನು ಮೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.
ಮುಖ್ಯ ಭಾಷಣ ಮಾಡಿದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಬಿ.ಜೆ.ಪಿ. ಅನ್ನುವುದು ಕೊಳಕು ಬಾಯಿಗಳ ನಾಯಕರನ್ನು ಸೃಷ್ಟಿಸುವ ಕಾರ್ಖಾನೆಯಂತಾಗಿದೆ. ಧಾರ್ಮಿಕ ವಿಚಾರಗಳನ್ನು ಅವಹೇಳನ ಮಾಡಿದ ಈಶ್ವರಪ್ಪ ಖಂಡಿತಾವಾಗಿಯೂ ಮುಂದಿನ ದಿನಗಳಲ್ಲಿ ಜನತೆಯಿಂದ ಅವಮಾನಿತರಾಗಲಿದ್ದಾರೆ ಎಂದರು.
ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿ ಎರಡು ದಿನಗಳಾದರೂ ಇನ್ನು ಕೂಡ ಪೊಲೀಸರು ಸುಮೋಟಾ ಕೇಸು ದಾಖಲಿಸದೇ ಇರುವುದು ವಿಚಿತ್ರವಾಗಿದೆ. ಪೊಲೀಸರ ನಡೆ ಈ ರೀತಿ ಯಾಕೆ ಎಂದು ಜಿಲ್ಲೆಯ ಜನರಿಗೆ ಉತ್ತರಿಸಬೇಕು ಎಂದರು. ಈಶ್ವರಪ್ಪರ ವಿರುದ್ಧ ಮಸೀದಿ ಕಮಿಟಿಯವರು ನೀಡಿದ ದೂರಿನನ್ವಯ FIR ದಾಖಲಿಸಿ ಜೈಲಿಗಟ್ಟಬೇಕು, ಇಲಾಖೆಗೆ ಅದು ಸಾಧ್ಯವಿಲ್ಲ ಎಂದಾದರೆ ನಾವೂ ಕೋರ್ಟ್ ಮುಖಾಂತರ ಕಾನೂನಿನ ರುಚಿ ತೋರಿಸಲಿದ್ದೇವೆ ಎಂದು ಎಚ್ಚರಿಕೆ ಕೊಟ್ಟರು.
ಎಸ್.ಡಿ.ಪಿ.ಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡಿ, ಜಿಲ್ಲೆಯ ಜನತೆ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿರುವಾಗ ಎಲ್ಲಿಂದಲೋ ಬಂದ ಈ ಬೆಪ್ಪನಿಂದ ಆಝಾನ್ ಬಗ್ಗೆ ತಕರಾರು ಎತ್ತಿ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕೆಡಿಸುವ ಕೆಲಸ ಮಾಡಿದ್ದಾರೆ. ಇವರಿಗೆ ಸಂಸ್ಕಾರ ಅನ್ನುವುದೇ ಇಲ್ಲ ಎಂದು ಲೇವಡಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ಮೂಡಬಿದರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆಸಿಫ್ ಕೋಟೆಬಾಗಿಲು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಕ್ಬರ್ ಕುದ್ರೋಳಿ, ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು. ಇರ್ಫಾನ್ ಕಾಲೋನಿ ನಿರೂಪಿಸಿದರು.