Home ಟಾಪ್ ಸುದ್ದಿಗಳು ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಬಿಸಿಸಿಐ ಮಹತ್ವದ ಘೋಷಣೆ

ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಬಿಸಿಸಿಐ ಮಹತ್ವದ ಘೋಷಣೆ

ಮುಂಬೈ: ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ವೇತನ (ಒಪ್ಪಂದ) ಸಮಾನವಾಗಿರುತ್ತದೆ ಎಂದು ಗುರುವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಘೋಷಣೆಯನ್ನು ಮಾಡಿದೆ. ಮ್ಯಾಚ್’ನ ವೇತನ ವಿಚಾರದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷ ಕ್ರಿಕೆಟಿಗರಿಗೆ ಸರಿಸಮಾನವಾಗಿ ನೋಡುವ ನಿರ್ಧಾರವು ಕ್ರಾಂತಿಕಾರಿಯಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಪುರುಷರಿಗೆ ಸಮಾನವಾದ ವೇತನವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಸಕ್ತ ಅಸ್ತಿತ್ವದಲ್ಲಿರುವ ತಾರತಮ್ಯವನ್ನು ಎದುರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿರುವ ಬಿಸಿಸಿಐಯ ನಿರ್ಧಾರವನ್ನು ಪ್ರಕಟಿಸಲು ನನಗೆ ಸಂತೋಷವಾಗಿದೆ. ನಮ್ಮ ಒಪ್ಪಂದದ ಮೂಲಕ ಮಹಿಳಾ ಕ್ರಿಕೆಟಿಗರಿಗೆ ವೇತನದಲ್ಲಿ ಸಮಾನತೆಯನ್ನು ತರುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋದಂತೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯದ ವೇತನ ಸಮಾನವಾಗಿರುತ್ತದೆ. ಕ್ರಿಕೆಟ್’ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಮತ್ತು ಪುರುಷ ಕ್ರಿಕೆಟಿಗರಿಗೆ ಸಮಾನವಾದ ವೇತನವನ್ನು ನೀಡಲಾಗುತ್ತದೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ, ಟಿ20 ಪಂದ್ಯಕ್ಕೆ 3 ಲಕ್ಷ ರೂ. ಅನ್ನು ಮಹಿಳಾ ಕ್ರಿಕೆಟಿಗರಿಗೂ ಪಾವತಿಸುವುದು ನನ್ನ ಬದ್ಧತೆಯಾಗಿದೆ ಮತ್ತು ಅವರನ್ನು ಬೆಂಬಲಿಸಿದಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್’ಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಹಿಳಾ ಐಪಿಎಲ್’ನ ಮೊದಲ ಆವೃತ್ತಿಯನ್ನು 2023ರಲ್ಲಿ ಆಡಲಾಗುವುದು ಎಂದು ಬಿಸಿಸಿಐ ನಿರ್ಧರಿಸಿದ ಕೆಲವೇ ದಿನಗಳಲ್ಲಿ ಈ ಹೊಸ ಆದೇಶ ಹೊರಬಿದ್ದಿದೆ ಎಂದು ಅವರು ಟ್ವೀಟ್’ನಲ್ಲಿ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದು, ಮಹಿಳಾ ರಾಷ್ಟ್ರೀಯ ತಂಡ ಮತ್ತು ದೇಶೀಯ ಮಹಿಳಾ ಆಟಗಾರರು ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಘೋಷಿಸಿತ್ತು.

Join Whatsapp
Exit mobile version