ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಇಯಾನ್ ಮಾರ್ಗನ್ ವಿದಾಯ

Prasthutha|

ಲಂಡನ್: ಇಂಗ್ಲೆಂಡ್ ಕ್ರಿಕೆಟ್’ನ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದ್ದ ನಿವೃತ್ತಿ ಕುರಿತ ಊಹಾಪೋಹಕ್ಕೆ ಮಾರ್ಗನ್ ತೆರೆ ಎಳೆದಿದ್ದಾರೆ.

- Advertisement -


2006ರಲ್ಲಿ ಐರ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮಾರ್ಗನ್, ಮೂರು ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಇದೀಗ 16 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ 2019ರ ವಿಶ್ವಕಪ್ ವಿಜೇತ ನಾಯಕ ತೆರೆ ಎಳೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾರ್ಗನ್ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇತ್ತೀಚೆಗೆ ನೆದರ್ಲ್ಯಾಂಡ್ ವಿರುದ್ಧದ ಎರಡೂ ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಗಾಯದ ಕಾರಣದಿಂದಾಗಿ ಅಂತಿಮ ಪಂದ್ಯದಲ್ಲಿ ಮಾರ್ಗನ್ ಹೊರಗುಳಿದಿದ್ದರು.


ʻಸಾಕಷ್ಟು ಸಮಾಲೋಚನೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇಂಗ್ಲೆಂಡ್ ತಂಡದಲ್ಲಿ ನನ್ನ ವೃತ್ತಿಜೀವನದ ಅತ್ಯಂತ ಆನಂದದಾಯಕ ಸಮಯವನ್ನು ಕಳೆದಿದ್ದೇನೆ. ನಿವೃತ್ತಿ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ ತಂಡದ ಮತ್ತು ವೈಯಕ್ತಿಕ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲು ಇದು ಸರಿಯಾದ ಸಮಯ ಎಂದು ನಾನು ನಂಬಿದ್ದೇನೆʼ.
ʻಐರ್ಲೆಂಡ್ನಿಂದ 2019 ರಲ್ಲಿಇಂಗ್ಲೆಂಡ್ ವಿಶ್ವಕಪ್ ಗೆಲ್ಲುವವರೆಗಿನ ಅಂತಾರಾಷ್ಟ್ರೀಯ ಕ್ರಿಕೆಟ್’ನ ಪಯಣದಲ್ಲಿ ಜೊತೆಯಾಗಿದ್ದ ನನ್ನ ಕುಟಂಬ, ಸಹ ಆಟಗಾರರು, ಇಸಿಬಿ, ತರಬೇತುದಾರರು ಹಾಗೂ ಸ್ನೇಹಿತರು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮ ಪ್ರೋತ್ಸಾಹವಿಲ್ಲದಿರುತ್ತಿದ್ದರೆ ಈ ಅದ್ಭುತ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ದೇಶೀಯ ಮಟ್ಟದಲ್ಲಿಹಾಗೂ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆʼ ಎಂದು ಮಾರ್ಗನ್ ವಿದಾಯ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -


ಐರ್ಲೆಂಡ್ ಪರ ಆಡಿದ್ದ ಮೂರು ವರ್ಷದಲ್ಲಿ ಮಾರ್ಗನ್ 23 ಏಕದಿನ ಪಂದ್ಯಗಳನ್ನಾಡಿದ್ದರು. ಒಟ್ಟು 225 ಏಕದಿನ ಪಂದ್ಯಗಳನ್ನಾಡಿರುವ ಮಾರ್ಗನ್, 126 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, 76 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ. 13 ಶತಕಗಳನು ಒಳಗೊಂಡಂತೆ 39.75ರ ಸರಾಸರಿಯಲ್ಲಿ 6,957 ರನ್ ದಾಖಲಿಸಿದ್ದಾರೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಏಕದಿನ ಪಂದ್ಯಗಳಾಡಿದ(225), ಅತಿ ಹೆಚ್ಚು ಸಿಕ್ಸರ್(202 ಸಿಕ್ಸರ್) ಸಿಡಿಸಿದ ಸಾಧನೆಯೂ ಮಾರ್ಗನ್ ಹೆಸರಿನಲ್ಲಿದೆ. ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡ, ಮೊಟ್ಟ ಮೊದಲ ಬಾರಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು (2019) ಮುಡಿಗೇರಿಸಿಕೊಂಡಿತ್ತು. ಈ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾರ್ಗನ್ ಬರೋಬ್ಬರಿ 17 ಸಿಕ್ಸರ್’ಗಳನ್ನು ಸಿಡಿಸಿ, ಒಂದೇ ಪಂದ್ಯದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ನಿರ್ಮಿಸಿದ್ದರು.


115 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಮಾರ್ಗನ್, 2,458 ರನ್ ದಾಖಲಿಸಿದ್ದಾರೆ. ಈ ನಡುವೆ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಇಂಗ್ಲಂಡ್ ತಂಡವನ್ನು ಮುನ್ನಡೆಸಿರುವ ಮಾರ್ಗನ್, ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಭಾರತದ ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದರು. ರಾಷ್ಟ್ರೀಯ ತಂಡದ ಪರ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್(120 ಸಿಕ್ಸರ್)ಗಳನ್ನು ಸಿಡಿಸಿದ ದಾಖಲೆ ಕೂಡ ಮಾರ್ಗನ್ ಹೆಸರಿನಲ್ಲಿದೆ. 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿಯೂ ಎಡಗೈ ಬ್ಯಾಟ್ಸ್ಮನ್ ಮಾರ್ಗನ್ ಪ್ರಮುಖ ಪಾತ್ರ ವಹಿಸಿದ್ದರು. ಒಟ್ಟು 16 ಟೆಸ್ಟ್ ಪಂದ್ಯಗಳ್ನನಾಡಿರುವ ಮಾರ್ಗನ್ ಎರಡು ಶತಕ ಸಿಡಿಸಿದ್ದಾರೆ. ಮಾರ್ಗನ್‌ ನಾಯಕತ್ವ ವೇಳೆ ಐಸಿಸಿ ಏಕದಿನ ಮತ್ತು ಟಿ20 ಶ್ರೇಯಾಂಕದಲ್ಲಿ ಇಂಗ್ಲೆಂಡ್‌ ಅಗ್ರಸ್ಥಾನಕ್ಕೇರಿತ್ತು.

Join Whatsapp
Exit mobile version