Home ಕ್ರೀಡೆ ಐಪಿಎಲ್ ನಲ್ಲಿ ‘36 ಲಕ್ಷ ಕಳೆದುಕೊಂಡ’ ಕೆಕೆಆರ್ ನಾಯಕ

ಐಪಿಎಲ್ ನಲ್ಲಿ ‘36 ಲಕ್ಷ ಕಳೆದುಕೊಂಡ’ ಕೆಕೆಆರ್ ನಾಯಕ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ –ಐಪಿಎಲ್ ನಲ್ಲಿ ಆಟಗಾರರು ಕೋಟಿ ಕೋಟಿ ಗಳಿಸುವುದು ಭಾರೀ ಸುದ್ದಿಯಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ ಬರೋಬ್ಬರಿ 36 ಲಕ್ಷ ರೂ ‘ಕಳೆದುಕೊಂಡು’ ಸುದ್ದಿಯಾಗಿದ್ದಾರೆ.


14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 34ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 7 ವಿಕೆಟ್’ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತ್ತು. ಆದರೆ ಗೆಲುವಿನ ಸಂಭ್ರಮದ ನಡುವೆಯೇ ಕೆಕೆಆರ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್’ಗೆ 24 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಕೆಕೆಆರ್ ತಂಡದ ಆಡುವ ಹನ್ನೊಂದರ ಬಳಗದಲ್ಲಿದ್ದ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ವೈಯಕ್ತಿಕ ಸಂಭಾವನೆಯ ಶೇ.25ರಷ್ಟು ಕಡಿಮೆಯಾಗದಂತೆ ದಂಡ ವಿಧಿಸಲಾಗಿದೆ.


14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದ ಕಾರಣಕ್ಕೆ ಎರಡನೇ ಬಾರಿಗೆ ಕೆಕೆಆರ್ ತಂಡಕ್ಕೆ ದಂಡ ವಿಧಿಸಲಾಗಿದೆ. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇದೇ ತಪ್ಪಿಗೆ ಕೆಕೆಆರ್ ನಾಯಕ ಇಯಾನ್ ಮಾರ್ಗನ್’ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿತ್ತು. ಹೀಗಾಗಿ ಮಾರ್ಗನ್ ಒಟ್ಟು 36 ಲಕ್ಷ ರುಪಾಯಿಗಳನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಿದೆ.

ಮಂಗಳವಾರ ನಡೆದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕಾಗಿ ಮೊದಲ ಬಾರಿಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್’ಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿತ್ತು.

Join Whatsapp
Exit mobile version