Home ಟಾಪ್ ಸುದ್ದಿಗಳು ಬಂಗಾಳದಲ್ಲೂ ಅನುಮತಿಯಿಲ್ಲದೆ ಅಭ್ಯರ್ಥಿಗಳ ಹೆಸರು ಘೋಷಣೆ । ಮತ್ತೆ ಮುಖಭಂಗಕ್ಕೀಡಾದ ಬಿಜೆಪಿ !!

ಬಂಗಾಳದಲ್ಲೂ ಅನುಮತಿಯಿಲ್ಲದೆ ಅಭ್ಯರ್ಥಿಗಳ ಹೆಸರು ಘೋಷಣೆ । ಮತ್ತೆ ಮುಖಭಂಗಕ್ಕೀಡಾದ ಬಿಜೆಪಿ !!

ಕೋಲ್ಕತ್ತಾ: ಕೋಲ್ಕತ್ತಾದ ಚೌರಿಂಗೀ ಕ್ಷೇತ್ರದಿಂದ ಬಿಜೆಪಿಯಿಂದ ಟಿಕಟ್ ಪಡೆದಿರುವ ಸಿಖಾ ಮಿತ್ರಾ ತನ್ನ ಒಪ್ಪಿಗೆ ಪಡೆಯದೇ ಹೆಸರನ್ನು ಪ್ರಕಟಿಸಲಾಗಿದೆ ಎಂಬ ಹೇಳಿಕೆಯಿಂದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.

ಬಂಗಾಳ ವಿಧಾನಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡುವಾಗ ದಿವಂಗತ ಕಾಂಗ್ರೆಸ್ ನಾಯಕ ಸೋಮನ್ ಮಿತ್ರಾ ಅವರ ಪತ್ನಿ ಶಿಖಾ ಮಿತ್ರಾ ಅವರ ಹೆಸರನ್ನೂ ಪ್ರಕಟಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಶಿಖಾ ಮಿತ್ರಾ, ಒಪ್ಪಿಗೆ ಪಡೆಯದೇ ತನ್ನ ಹೆಸರನ್ನು ಪ್ರಕಟಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಾನು ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಬಿಜೆಪಿ ಬೆಂಬಲಿತೆ ಅಲ್ಲ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ನಿಂದ ಬಂದ ವಲಸಿಗರಿಗೆ ಕಾರ್ಯಕರ್ತರಿಂದ ಭಾರೀ ಆಕ್ರೋಶ ಎದುರಿಸುತ್ತಿರುವ ಬಿಜೆಪಿಯು ಇದರಿಂದಾಗಿ ಮುಖಭಂಗಕ್ಕೊಳಗಾಗಿದೆ.

“ಕೊನೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಪಟ್ಟಿಯಲ್ಲಿರುವ ಕೆಲವರು ನಾವು ಬಿಜೆಪಿಯ ಬೆಂಬಲಿಗರಲ್ಲ ಹಾಗೂ ಬಿಜೆಪಿಯ ಟಿಕೆಟ್ ಪಡೆಯಲು ಪ್ರಯತ್ನಿಸಲಿಲ್ಲ ಎನ್ನುತ್ತಿದ್ದಾರೆ” ಎಂದು ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಕೇರಳದ ಮಾನಂದವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟ ಮಣಿಕುಟ್ಟನ್ ಎಂಬವರು ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ತನಗೆ ತಿಳಿಯದೆಯೇ ಬಿಜೆಪಿ ತನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ತಾನು ಬಿಜೆಪಿ ಬೆಂಬಲಿಗನಲ್ಲ ಎಂದು ಅವರು ಹೇಳಿದ್ದರು.

Join Whatsapp
Exit mobile version