ವಾಷಿಂಗ್ಟನ್: ಸ್ಪೇಸ್-X ಹಾಗೂ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಗತ್ತಿನ ನಂ-1 ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್, ತಾನು ವಾರ್ಷಿಕವಾಗಿ ಪಾವತಿಸುತ್ತಿರುವ ತೆರಿಗೆಯ ಮೊತ್ತವನ್ನು ಟ್ವಿಟರ್’ನಲ್ಲಿ ಬಹಿರಂಗಪಡಿಸಿದ್ದಾರೆ.
‘ನಾನು ಎಷ್ಟು ತೆರಿಗೆ ಪಾವತಿಸುತ್ತೇನೆ ಎಂದು ಯೋಚಿಸುತ್ತಿರುವವರಿಗಾಗಿ, ನಾನು ಈ ವರ್ಷ 11 ಶತಕೋಟಿ ಡಾಲರ್ (ಸರಿಸುಮಾರು 83,572 ಕೋಟಿ ರೂಪಾಯಿ)ಗಿಂತಲೂ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತೇನೆ’ ಎಂದು ಟ್ವಿಟರ್’ನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಎಲಿಜಬೆತ್ ವಾರೆನ್ ಟ್ವೀಟ್ ಮಾಡಿ ‘ಎಲ್ಲವನ್ನೂ ತಾವೊಬ್ಬರೇ ಇಟ್ಟುಕೊಳ್ಳುವುದನ್ನು ಬಿಟ್ಟು ಎಲೊನ್ ಮಸ್ಕ್ ತೆರಿಗೆ ಪಾವತಿಸಬೇಕು‘ ಎಂದು ಹೇಳಿದ್ದರು. ಎಲಿಜಬೆತ್ ವಾರೆನ್ ಅವರಿಗೆ ಟ್ವಿಟರ್‌ನಲ್ಲೇ ತಿರುಗೇಟು ನೀಡಿದ್ದ ಮಸ್ಕ್, ‘ನೀವು 2 ಕ್ಷಣ ನಿಮ್ಮ ಕಣ್ಣುಗಳನ್ನು ತೆರೆದು ನೋಡಿದರೆ, ಅಮೆರಿಕದ ಇತಿಹಾಸದಲ್ಲೆ ಈ ವರ್ಷ ಅತ್ಯಧಿಕ ತೆರಿಗೆಯನ್ನು ಪಾವತಿಸುವವರು ಯಾರು ಎಂಬುದು ನಿಮಗೆ ಗೊತ್ತಾಗಲಿದೆ,’ ಎಂದಿದ್ದರು.
‘ಟೈಮ್’ ನಿಯತಕಾಲಿಕೆಯು ತನ್ನ ‘ವರ್ಷದ ವ್ಯಕ್ತಿ’ ಎಂದು ಎಲೋನ್ ಮಸ್ಕ್’ರನ್ನು ಇತ್ತೀಚೆಗೆ ಘೋಷಿಸಿತ್ತು. ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎಲೊನ್ ಮಸ್ಕ್ ಅವರ ಟೆಸ್ಲಾ ಕಂಪನಿ 1 ಟ್ರಿಲಿಯನ್ (75 ಲಕ್ಷ ಕೋಟಿ) ಮೌಲ್ಯ ಹೊಂದಿದೆ. ಕಳೆದ ಕೆಲ ವಾರಗಳಲ್ಲಿ ಮಸ್ಕ್ ತಮ್ಮ ಸಂಸ್ಥೆಯ 14 ಬಿಲಿಯನ್ ಡಾಲರ್ ಮೌಲ್ಯದ ಶೇರುಗಳನ್ನು ಮಾರಾಟ ಮಾಡಿದ್ದಾರೆ.
ಜಾಗತಿಕವಾಗಿ ಉಪಗ್ರಹ ಆಧರಿತ ಇಂಟರ್ನೆಟ್ ಒದಗಿಸುವುದಕ್ಕಾಗಿ ಇತ್ತೀಚೆಗಷ್ಟೇ 52 ಸ್ಟಾರ್’ಲಿಂಕ್ ಸ್ಯಾಟ್‌ಲೈಟ್‌ಗಳನ್ನು ಸ್ಪೇಸ್-X ಯಶಸ್ವಿಯಾಗಿ ಕ್ಯಾಲಿಫೋರ್ನಿಯಾದಿಂದ ಉಡಾವಣೆ ಮಾಡಿತ್ತು. ಸ್ಪೇಸ್-X ಕಂಪನಿಯ ಭಾಗವಾಗಿರುವ ಸ್ಟಾರ್’ಲಿಂಕ್ ಮುಂದಿನ ವರ್ಷದಿಂದ ಭಾರತದಲ್ಲೂ ತನ್ನ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರದ ಅನುಮತಿಗಾಗಿ ಮುಂದಿನ ಜನವರಿಯಲ್ಲಿ ಅರ್ಜಿ ಸಲ್ಲಿಸಲಿದ್ದು, ಜನವರಿ ಅಂತ್ಯಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ಸ್ಟಾರ್’ಲಿಂಕ್ ಇಂಡಿಯಾ ಮುಖ್ಯಸ್ಥ ಸಂಜಯ್ ಭಾರ್ಗವ್ ಇತ್ತೀಚೆಗಷ್ಟೇ ಹೇಳಿದ್ದರು