ಮುಂಬೈ : ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರು, ತಮ್ಮ ಬಳಿಯಿಂದ ವಶಪಡಿಸಿಕೊಳ್ಳಲಾದ ಸಿಪ್ಪರ್ ಮತ್ತು ಸ್ಟ್ರಾ ಹಿಂದಿರುಗಿಸುವಂತೆ ನ್ ಐಎ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎನ್ ಐಎ ಕೋರ್ಟ್, ರಾಷ್ಟ್ರೀಯ ತನಿಖಾ ದಳದ ವಾದವನ್ನು ಆಧರಿಸಿ, ಗುರುವಾರ ಸ್ವಾಮಿ ಅವರ ಅರ್ಜಿಯನ್ನು ತಳ್ಳಿ ಹಾಕಿತ್ತು. ಆ ಬಳಿಕ, ಇದೀಗ ಶುಕ್ರವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್ ಪಾರ್ಸೆಲ್ ಮಾಡುವ ಅಭಿಯಾನ ಆರಂಭವಾಗಿದೆ.
ಮುಂಬೈಯ ರಾಷ್ಟ್ರೀಯ ತನಿಖಾ ದಳದ ಮುಂಬೈ ಕಚೇರಿಗೆ ಹಲವರು ಸ್ಟ್ರಾ ಮತ್ತು ಸಿಪ್ಪರ್ ಕಳುಹಿಸಿಕೊಡುವ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ವಯೋವೃದ್ಧ ಸ್ವಾಮಿ ಅವರಿಗೆ ಕೈ ನಡುಗುವಂತಹ ಕಾಯಿಲೆಯಿದ್ದು, ಆಹಾರ ತಿನ್ನಲು ಇತರ ಪಾತ್ರೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ, ಎನ್ ಐಎ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್ ಗಳನ್ನು ಬಳಸಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಟ್ವಿಟರ್ ನಲ್ಲಿ #SipperForStan ಹ್ಯಾಶ್ ಟ್ಯಾಗ್ ಬಳಸಿ, ಈ ಅಭಿಯಾನ ನಡೆಸಲಾಗುತ್ತಿದೆ.