ಬೆಂಗಳೂರು: ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿರುವ ಕುರಿತು ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿರುವ ದೇಣಿಗೆಯ ವಿವರಗಳು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಬಹಿರಂಗವಾಗಿವೆ. ಚುನಾವಣಾ ಬಾಂಡ್ ವ್ಯವಸ್ಥೆಯನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡಿಕೊಂಡಿದೆ ಎಂಬುದು ಬಯಲಿಗೆ ಬಂದಿದೆ. ಈ ಕುರಿತು ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಸಿ, ಕ್ರಮ ಜರುಗಿಸಬೇಕು ಎಂದರು. ಒಟ್ಟು ಖರೀದಿಯಾದ ಚುನಾವಣಾ ಬಾಂಡ್ಗಲ್ಲಿ ಶೇಕಡ 50ರಷ್ಟು ಬಿಜೆಪಿಗೆ ಸಂದಾಯವಾಗಿವೆ. ಅದರ ಮೂಲಕ ಬಿಜೆಪಿಯು ಭಾರಿ ಮೊತ್ತದ ಹಣ ಸಂಗ್ರಹಿಸಿದೆ. ಬಿಜೆಪಿಯು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿರುವುದರಿಂದ ತಕ್ಷಣವೇ ಆ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.