ಮೈಸೂರು: ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ SDPI ಅಭ್ಯರ್ಥಿ ಅಬ್ದುಲ್ ಮಜೀದ್ ಇಂದು(ಏ.13) ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಪಕ್ಷದ ಸಾವಿರಾರು ಕಾರ್ಯಕರ್ತರು ರಾಜೀವ್ ನಗರದ ಅಲ್ ಬದ್ರ್ ವೃತ್ತದಿಂದ ಉದಯಗಿರಿಯ ಪಕ್ಷದ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಅಲ್ಲಿ ಕೆಲವು ಹಿರಿಯ ನಾಯಕರು ಸೇರಿಕೊಂಡು ನಾಮಪತ್ರ ಸಲ್ಲಿಸಲು ಚಾಮುಂಡಿ ವಿಹಾರ ಸ್ಟೇಡಿಯಂಗೆ ತೆರಳಿದರು.
ಗುರುವಾರ ಬೆಳಿಗ್ಗೆ ನಗರದ ಉದಯಗಿರಿ ಅಲ್ ಬದರ್ ವೃತ್ತದಿಂದ ಬೃಹತ್ ಬೈಕ್ ಜಾಥಾ ಮೂಲಕ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಬಹುಜನ ಸಮಾಜ ಪಕ್ಷ ಎನ್ ಆರ್ ಕ್ಷೇತ್ರ ಸೇರಿದಂತೆ ರಾಜ್ಯದ ವಿವಿಧ ಕಡೆ ಎಸ್’ಡಿಪಿಐಗೆ ಬೆಂಬಲ ಸೂಚಿಸಿದೆ. ಹೀಗಾಗಿ ಗುರುವಾರದ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಸ್’ಪಿ ಕಾರ್ಯಕರ್ತರು ಭಾಗವಹಿಸಿದ್ದುದು ಕಂಡುಬಂತು. ಅಲ್ಲದೇ ಗಮನಾರ್ಹ ಸಂಖ್ಯೆಯಲ್ಲಿ ಕ್ರೈಸ್ತ ಬಂಧುಗಳೂ ಸಹ ಎಸ್’ಡಿಪಿಐ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಎಸ್’ಡಿಪಿಐ ರಾಜ್ಯಾಧ್ಯಕ್ಷರೂ ಅಭ್ಯರ್ಥಿ ಅಬ್ದುಲ್ ಮಜೀದ್ ಮಾತನಾಡಿ, ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜ ನಿರ್ಮಾಣ ಮಾಡುವುದು ಎಸ್’ಡಿಪಿಐ ಉದ್ಧೇಶವಾಗಿದೆ. ಜತೆಗೆ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ದಲಿತ ಹಿಂದುಳಿದ ಮತ್ತು ಕ್ರೈಸ್ತ ಸಮುದಾಯಕ್ಕೆ ಯಾವುದೇ ರೀತಿಯ ಅಪಾಯ ಎದುರಾದಲ್ಲಿ ಎಸ್’ಡಿಪಿಐ ಅವರ ರಕ್ಷಣೆಗೆ ಮುಂದಾಗುತ್ತದೆ ಎಂದರು.
ಎನ್ ಆರ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊಂದಿದ್ದು, ಈ ಬಾರಿ ಕ್ಷೇತ್ರದ ಮತದಾರರು ತಮ್ಮನ್ನು ಬಹುಮತದಿಂದ ಗೆಲ್ಲಿಸುವ ಭರವಸೆ ಇದೆ ಎಂದರು.
ಬಿಎಸ್’ಪಿ ರಾಜ್ಯ ಕಾರ್ಯದರ್ಶಿ ಆರ್.ಶಂಕರ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ನಾವುಗಳು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಎಸ್’ಡಿಪಿಐ ಪಕ್ಷಕ್ಕೆಬೆಂಬಲ ನೀಡುತ್ತಿದ್ದೇವೆ. ಅದೇ ರೀತಿ ಅವರೂ ಕೂಡ ವಿವಿಧ ಕ್ಷೇತ್ರಗಳಲ್ಲಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಎನ್’ಆರ್ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿದ್ದು, ಎಸ್’ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಅವರ ಪರ ಪ್ರಚಾರ ಮಾಡಲಿದ್ದಾರೆ. ಈ ಬಾರಿ ಎನ್’ಆರ್ ಕ್ಷೇತ್ರದಲ್ಲಿ ಅವರ ಗೆಲುವು ನಿಶ್ಚಿತ ಎಂದರು.
ರಾಜೀವ್ ನಗರದ ಅಲ್ ಬದರ್ ಸರ್ಕಲ್ ನಿಂದ ಪಕ್ಷದ ಸಾವಿರಾರು ಕಾರ್ಯಕರ್ತರು ಚುನಾವಣಾಧಿಕಾರಿ ಕಚೇರಿ ತನಕ ಮೆರವಣಿಗೆಯಲ್ಲಿ ಬಂದರು. ಅನಂತರ ಅಬ್ದುಲ್ ಮಜೀದ್ ಅವರು ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾಧ್ಯಕ್ಷ ರಫತ್ ಖಾನ್ ಹಾಗೂ ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ಆರ್ ಶಂಕರ್ ಜತೆಗೂಡಿ ಚುನಾವಣಾಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್, ಜಿಲ್ಲಾಧ್ಯಕ್ಷ ರಫತ್ ಖಾನ್, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಆರ್.ಶಂಕರ್ ಉಪಸ್ಥಿತರಿದ್ದರು.