ಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಅದು ರಾಜ್ಯದ ವಿಕಾಸಕ್ಕಾಗಿ ಇರುವ ಸಾಧನ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಅದು ರಾಜ್ಯದ ವಿಕಾಸಕ್ಕಾಗಿ, ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರಲು ಇರುವ ಸಾಧನ. ನಾವು ಒಮ್ಮೆ ಭರವಸೆಗಳನ್ನು ಕೊಟ್ಟ ಮೇಲೆ 5 ವರ್ಷಗಳ ಅವಧಿಯಲ್ಲಿ ಅದನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, 2013ರಲ್ಲಿ ನಾವು ಪಕ್ಷದ ಪ್ರಣಾಳಿಕೆಯ ಮೂಲಕ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ಯಾವ ಭರವಸೆ ನೀಡಿದ್ದೆವು ಮತ್ತು ಏನು ಮಾಡಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಆದರೆ ಬಿಜೆಪಿಯವರು 2018ರಲ್ಲಿ ಪ್ರಣಾಳಿಕೆಯ ಮೂಲಕ ನೀಡಿದ್ದ 600 ಭರವಸೆಗಳಲ್ಲಿ 3 ವರ್ಷ 10 ತಿಂಗಳ ಅವಧಿಯಲ್ಲಿ ಈಡೇರಿಸಿದ್ದು ಕೇವಲ 55 ಭರವಸೆಗಳು ಮಾತ್ರ. 10% ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ, ನಿನ್ನೆ ಅವರು ನೀಡಿರುವ ಭರವಸೆಗಳನ್ನು ಕೂಡ ಈಡೇರಿಸುವ ಉದ್ದೇಶದಿಂದ ನೀಡಿರುವುದಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಇದೇ ರೀತಿ ಮಾಡಿದೆ. ರೈತರಿಗೆ ಬಿಜೆಪಿ ಪಕ್ಷ ಅನೇಕ ಭರವಸೆಗಳನ್ನು ನೀಡಿತ್ತು, ಅದರಲ್ಲಿ ಬಹುತೇಕ ಭರವಸೆಗಳನ್ನು ಈಡೇರಿಸಿಲ್ಲ, ಬಿಜೆಪಿಗೆ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂಬ ಪ್ರಾಮಾಣಿಕತೆ ಇಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಬದ್ಧತೆಯಿಂದ ನಡೆದುಕೊಂಡಿದೆ ಎಂದರು.

ಹಿಂದೆ ನಾವು ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಗಳ – ವರ್ಗದ, ಹಿಂದುಳಿದ ವರ್ಗದ, ಅಲ್ಪಸಂಖ್ಯಾತ ವರ್ಗಗಳ ಜನರ ಸಬಲೀಕರಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ಕೊಟ್ಟಿದ್ದೆವು. ಉದಾಹರಣೆಗೆ ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆ, ಬಹುಶಃ ತೆಲಂಗಾಣ ರಾಜ್ಯವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲಿ ಇಂಥದ್ದೊಂದು ಕಾಯ್ದೆ ಇರಲಿಲ್ಲ. ದಲಿತರ ಬಗ್ಗೆ ಬಹಳ ಮಾತನಾಡುವ ಮೋದಿ ಅವರು ಸಬ್‌ ಕ ಸಾಥ್‌, ಸಬ್‌ ಕ ವಿಕಾಸ್‌ ಎನ್ನುತ್ತಾರೆ ಆದರೆ ಇಂಥ ಕಾಯ್ದೆಯನ್ನು ಯಾಕೆ ಅವರು ಕೇಂದ್ರದಲ್ಲಿ ಜಾರಿಗೆ ತಂದಿಲ್ಲ. ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಖರ್ಚು ಮಾಡುವ ಕೆಲಸವನ್ನು ಯಾಕೆ ಮಾಡಿಲ್ಲ. 2013ರಲ್ಲಿ ನಮ್ಮ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿತು. ಅಲ್ಲಿಯವರೆಗೆ ಈ ಯೋಜನೆಗಳಿಗೆ ಖರ್ಚಾಗಿದ್ದ ಹಣ 22,000 ಕೋಟಿ ರೂಪಾಯಿ. ಕಾಯ್ದೆ ಜಾರಿಯಾದ ನಂತರ 88,000 ಕೋಟಿ ರೂಪಾಯಿ ಈ ಯೋಜನೆಗೆ ಖರ್ಚಾಯಿತು. ನಮ್ಮ ಸರ್ಕಾರದ ಕೊನೆಯ ಬಜೆಟ್‌ ನಲ್ಲಿ ಈ ಯೋಜನೆಗೆ ಮೀಸಲಾಗಿಟ್ಟಿದ್ದ ಹಣ 30,000 ಕೋಟಿ, ಆಗ ನಮ್ಮ ಬಜೆಟ್‌ ಗಾತ್ರ ಇದ್ದದ್ದು 2.02 ಲಕ್ಷ ಕೋಟಿ ರೂಪಾಯಿ. ಈ ಸಾಲಿನ ಬಜೆಟ್‌ ಗಾತ್ರ 3.10 ಲಕ್ಷ ಕೋಟಿ ರೂಪಾಯಿ ಇದೆ ಆದರೆ ಈ ಯೋಜನೆಗೆ ಇಟ್ಟಿರುವ ಹಣ 28,000 ಕೋಟಿ ರೂಪಾಯಿ. ಒಂದು ಕಡೆ ಬಜೆಟ್‌ ಗಾತ್ರ ಹೆಚ್ಚಾಗಿದೆ, ಆದರೆ ಈ ಯೋಜನೆಗೆ ಖರ್ಚು ಮಾಡುವ ಹಣ ಕಡಿಮೆಯಾಗಿದೆ. ಅಂದರೆ ಬಿಜೆಪಿಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಪ್ರಗತಿ ಆಗಬೇಕು ಎಂಬುದರಲ್ಲಿ ಆಸಕ್ತಿ ಇಲ್ಲ. ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಪರ ಇಲ್ಲ. ಮಂಡಲ್‌ ಕಮಿಷನ್‌ ವರದಿ ವಿರೋಧ ಮಾಡಿದವರು, ಸಂವಿಧಾನದ 73 ಹಾಗು 74ನೇ ತಿದ್ದುಪಡಿ ಮಸೂದೆಗೆ ವಿರೋಧ ಮಾಡಿದ್ದು, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗ ವಿರೋಧ ಮಾಡಿದವರು ಬಿಜೆಪಿಯವರು. ಈಗ ಸಾಮಾಜಿಕ ನ್ಯಾಯದ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುತ್ತಾರೆ. ಶೋಷಿತ ಜನರ ಬಗ್ಗೆ ಮಾತನಾಡುವ ಯಾವ ನೈತಿಕತೆ ಬಿಜೆಪಿಗೆ ಇದೆ ಎಂದು ಪ್ರಶ್ನಿಸಿದ್ದಾರೆ.

- Advertisement -

ಮೀಸಲಾತಿ ಪುನರ್‌ ವರ್ಗೀಕರಣ ಮಾಡುತ್ತೇವೆ ಎಂದು ಇಡೀ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನು ರದ್ದು ಮಾಡಿ ಒಕ್ಕಲಿಗರಿಗೆ 2% ಮತ್ತು ಲಿಂಗಾಯತರಿಗೆ 2% ನೀಡಿದ್ರು. ಒಕ್ಕಲಿಗರು ಕೇಳಿದ್ದು ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನಾವು 12% ಇದ್ದೇವೆ ನಮಗೆ 12% ಮೀಸಲಾತಿ ನೀಡಿ ಎಂದು, ಲಿಂಗಾಯತರು ತಮ್ಮನ್ನು 3ಬಿ ಇಂದ 2ಎ ಗೆ ಸೇರಿಸಿ ಎಂದು ಕೇಳಿದ್ದರು. ಅವರಿಗೆ ಮೀಸಲಾತಿ ಹೆಚ್ಚಿಸುವುದಕ್ಕೆ ನಾವು ಕೂಡ ಅವರ ಪರವಾಗಿದ್ದೇವೆ. ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮೀಸಲಾತಿ ಪ್ರಮಾಣ 50% ಗಿಂತ ಹೆಚ್ಚಾಗಬಾರದು ಎಂದು ಹೇಳಿದೆ, ಇದು ಕಡ್ಡಾಯವಲ್ಲ, ವಿಶೇಷ ಸಂದರ್ಭದಲ್ಲಿ ಈ ಮಿತಿಯನ್ನು ಮೀರಬಹುದು ಎಂದು ಅದೇ ತೀರ್ಪಿನಲ್ಲಿ ಹೇಳಲಾಗಿದೆ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು 69% ಮಾಡಿದ್ದಾರೆ, ಸರ್ಕಾರ ವಿಶೇಷ ಸಂದರ್ಭಕ್ಕೆ ಅನುಗುಣವಾಗಿ ಈ ಮೀಸಲಾತಿ ಪ್ರಮಾಣವನ್ನು 50% ಗಿಂತ ಹೆಚ್ಚು ಮಾಡಬಹುದಾಗಿತ್ತು. ವೀರಪ್ಪ ಮೋಯಿಲಿ ಅವರ ಸರ್ಕಾರ ಇದ್ದಾಗ ಈ ಮಿತಿಯನ್ನು 73%ಗೆ ಹೆಚ್ಚಳ ಮಾಡಿತ್ತು, ಅದೀಗ ನ್ಯಾಯಾಲಯದಲ್ಲಿದೆ. ಕಾರಣ 9ನೇ ಶೆಡ್ಯೂಲ್‌ ಗೆ ಸೇರಿರಲಿಲ್ಲ. ನಾವು ಈ ಬಾರಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿ ಪ್ರಮಾಣವನ್ನು 75% ಗೆ ಹೆಚ್ಚಳ ಮಾಡಿ, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ವರ್ಗ, ಅಲ್ಪಸಂಖ್ಯಾತರು ಇವರೆಲ್ಲರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುತ್ತೇವೆ. ಎಸ್‌,ಸಿ ಜನಸಂಖ್ಯೆ 17.15% ಇದೆ, ಅವರ ಮೀಸಲಾತಿಯನ್ನು 17% ಗೆ, ಎಸ್‌,ಟಿ ಜನಸಂಖ್ಯೆ 7% ಇದೆ ಅವರ ಮೀಸಲಾತಿಯನ್ನು 3% ಇಂದ 7% ಗೆ ಹೆಚ್ಚಿಸುತ್ತೇವೆ. ಇದನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸದಿದ್ದರೆ ಸಂವಿಧಾನಾತ್ಮಕ ರಕ್ಷಣೆ ಇರುವುದಿಲ್ಲ. ಅದನ್ನು ಮಾಡುತ್ತೇವೆ. ರಾಜ್ಯ ಸರ್ಕಾರ ನಾಗಮೋಹನ್‌ ದಾಸ್‌ ಅವರ ವರದಿ ಆಧರಿಸಿ ಮಾಡಿರುವ ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ನಾರಾಯಣ ಸ್ವಾಮಿ ಅವರೇ ಈ ಬಗ್ಗೆ ಸಂಸತ್ತಿನಲ್ಲಿ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷ ಮೀಸಲಾತಿ ವಿಚಾರದಲ್ಲಿ ಸಂವಿಧಾನ ಹೇಳಿದಂತೆ ನಡೆಯುತ್ತದೆ. ಸಮಾಜದಲ್ಲಿರುವ ಅವಕಾಶ ವಂಚಿತ, ಶೋಷಿತ ವರ್ಗಗಳ ಜನರಿಗೆ ನ್ಯಾಯ ಕೊಡಬೇಕು, ಅವರು ಇತರರಂತೆ ಮುಖ್ಯವಾಹಿನಿಗೆ ಬರಬೇಕು ಎಂಬ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ, ಅವರಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಲು 168 ಕೋಟಿ ಅನುದಾನ ನೀಡಿ ನ್ಯಾಯವಾದಿ ಕಾಂತರಾಜ್‌ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಸಿದ್ದೆ. ನಾನು ಮುಖ್ಯಮಂತ್ರಿಯಾಗಿರುವಾಗ ವರದಿ ಸಿದ್ಧಗೊಂಡಿರಲಿಲ್ಲ, ಕುಮಾರಸ್ವಾಮಿ ವರದಿಯನ್ನು ಸ್ವೀಕಾರ ಮಾಡಲಿಲ್ಲ. ಈಗ ವರದಿ ಸರ್ಕಾರದ ಮುಂದಿದೆ. ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಅರಿವು ಇಲ್ಲದೆ ಇದ್ದರೆ ಅವುಗಳ ಸಬಲೀಕರಣ ಕಾರ್ಯಕ್ರಮವನ್ನು ರೂಪಿಸಲು ಸಾಧ್ಯವಾಗಲ್ಲ. ಅದಕ್ಕಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಮೀಕ್ಷಾ ವರದಿಯ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಅನುಷ್ಠಾನ ಮಾಡುತ್ತೇವೆ.

ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆಯ 7ಡಿ ಸೆಕ್ಷನ್‌ ನ ದುರುಪಯೋಗ ಆಗುತ್ತಿದೆ. ಈ ಸಮುದಾಯಗಳ ಜನರಿಗೆ ಖರ್ಚಾಗಬೇಕಿದ್ದ ಹಣವನ್ನು ನೀರಾವರಿಗೆ ಖರ್ಚು ಮಾಡಿ ಅಲ್ಲಿ ದಲಿತರು ಇದ್ದಾರೆ ಎನ್ನುವುದು, ಕುಡಿಯುವ ನೀರು, ರಸ್ತೆ, ಸೇತುವೆಗಳಿಗೆ ಅನುದಾನ ಬಳಕೆ ಮಾಡಿ ಇದರಿಂದ ದಲಿತರಿಗೂ ಅನುಕೂಲವಾಗಿದೆ ಎನ್ನುತ್ತಾರೆ. ಹೀಗೆ ಇದು ದುರುಪಯೋಗ ಆಗುತ್ತಿದೆ. ಅದಕ್ಕೆ ನಾವು ಅಧಿಕಾರಕ್ಕೆ ಬಂದ ನಂತರ 7ಡಿ ಸೆಕ್ಷನ್‌ ಅನ್ನು ರದ್ದು ಮಾಡುತ್ತೇವೆ. ನಾವು ಇಡುವ ಹಣ ಸಂಪೂರ್ಣವಾಗಿ ಈ ಸಮುದಾಯಗಳಿಗೆ ಖರ್ಚಾಗಬೇಕು ಎಂದರು.

ನಾವು ಸಾವಿತ್ರಿ ಫುಲೆ ಅವರ ಹೆಸರಲ್ಲಿ ಒಂದು ಕಾರ್ಯಕ್ರಮ ರೂಪಿಸಿದ್ದೇವೆ. 1 ರಿಂದ 5ನೇ ತರಗತಿ ವರೆಗೆ ಪ್ರತೀ ವಿದ್ಯಾರ್ಥಿಗೆ ಮಾಸಿಕ 150 ರೂಪಾಯಿ ನೀಡುವುದು, 6 ರಿಂದ 10 ರವರೆಗೆ ಮಾಸಿಕ 300 ರೂಪಾಯಿ ಪ್ರೋತ್ಸಾಹ ಧನ ನೀಡುವುದು. ಇದಕ್ಕೆ ಕಾರಣವೆಂದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಖರೀದಿಸಲು ಹಣವಿರಲ್ಲ, ದೂರದ ಊರುಗಳಿಂದ ಶಾಲೆಗೆ ಬರಲು ಕಷ್ಟವಾಗುತ್ತಿದೆ ಎಂದು ಮಾಡಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡಿದ್ದೆವು, ಈ ಬಾರಿ ಶಾಲಾ ಹೆಣ್ಣು ಮಕ್ಕಳು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಉಚಿತ ಬಸ್‌ ಪಾಸ್‌ ನೀಡುವ ತೀರ್ಮಾನ ಮಾಡಿದ್ದೇವೆ ಎಂದರು.

ಮೋದಿ ಅವರು ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರೆಂಟಿಗಳನ್ನು ಈಡೇರಿಸಲು ಆಗಲ್ಲ, ಹಾಗೆ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದಾರೆ. ಇದನ್ನು ಅವರಿಂದ ನಾನು ನಿರೀಕ್ಷೆ ಮಾಡಿರಲಿಲ್ಲ. ಹಾಗಾದರೆ ಈಗ ಬಿಜೆಪಿ ಕೊಟ್ಟಿರುವ ಭರವಸೆಗಳ ಕತೆ ಏನು? ರಾಜ್ಯ ದಿವಾಳಿಯಾಗಲ್ವಾ? ಬಿಜೆಪಿ ಸರ್ಕಾರ ಮಾಡಿರುವ ಸಾಲದ ಹೊರೆಯಿಂದಾಗಿ ಪ್ರತೀ ವರ್ಷ 56,000 ಕೋಟಿ ಹಣವನ್ನು ಅಸಲು ಮತ್ತು ಬಡ್ಡಿ ರೂಪದಲ್ಲಿ ಕಟ್ಟಬೇಕಾಗಿದೆಯಲ್ಲ ಇದಕ್ಕೆ ಎಲ್ಲಿಂದ ಹಣ ತರುತ್ತಾರೆ? ಸ್ವಾತಂತ್ರ್ಯ ನಂತರದಿಂದ ನಮ್ಮ ಸರ್ಕಾರದ ಕೊನೆಯ ಅವಧಿಯ ವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಕಳೆದ 5 ವರ್ಷದಲ್ಲಿ ಇದು 5 ಲಕ್ಷದ 64 ಸಾವಿರ ಕೋಟಿಗೆ ಹೆಚ್ಚಾಗಿದೆ. ಈ ಸರ್ಕಾರ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದೆ. ಈ ಸಾಲದ ಪ್ರಮಾಣವನ್ನು ಕಡಿಮೆ ಮಾಡಬೇಕಾಗಿದೆ. ಪ್ರತೀ ವರ್ಷ ಮಾಡುವ ಸಾಲದ ಪ್ರಮಾಣ ಕಡಿಮೆ ಮಾಡಿ ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡಿ ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿದರೆ ಸಾಕು ನಮ್ಮ ಎಲ್ಲಾ ಭರವಸೆಗಳನ್ನು ಸುಲಭದಲ್ಲಿ ಈಡೇರಿಸಲು ಸಾಧ್ಯವಿದೆ. 56,000 ಕೋಟಿ ರೂಪಾಯಿ ಸಾಲ ಮರುಪಾವತಿಯ ಹಣ ಸರ್ಕಾರದ ಆಸ್ತಿ ಸೃಜನೆಗಾಗಿ ಅಲ್ಲ, ಅದರಿಂದ ರಾಜ್ಯಕ್ಕೆ ಯಾವ ಲಾಭವೂ ಆಗಲ್ಲ. ನರೇಂದ್ರ ಮೋದಿ ಅವರಿಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು 13 ಬಜೆಟ್‌ ಗಳನ್ನು ಮಂಡಿಸಿರುವುದರಿಂದ ಕರ್ನಾಟಕದ ಹಣಕಾಸಿನ ಸ್ಥಿತಿಯ ಪೂರ್ಣ ಅರಿವು ನನಗಿದೆ. ನಾವೇನು ಈಗ 5 ಗ್ಯಾರೆಂಟಿಗಳನ್ನು ಕೊಟ್ಟಿದ್ದೇವೆ ಜೊತೆಗೆ ನಮ್ಮ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ಚಾಚು ತಪ್ಪದೆ ಜಾರಿ ಮಾಡುತ್ತೇವೆ. ನಮ್ಮ 5 ಗ್ಯಾರೆಂಟಿಗಳನ್ನಂತೂ ಮೊದಲನೇ ಕ್ಯಾಬಿನೆಟ್‌ ಸಭೆಯಲ್ಲಿ ತೀರ್ಮಾನ ಮಾಡಿ ಜಾರಿಗೆ ಕೊಡುತ್ತೇವೆ. ನರೇಂದ್ರ ಮೋದಿ ಅವರು ಜನರಿಗೆ ತಪ್ಪು ಮಾಹಿತಿ ಕೊಡಲು ಹೋಗಬೇಡಿ ಎಂದು ಅವರನ್ನು ಆಗ್ರಹಿಸುತ್ತೇನೆ. ರಾಜ್ಯದ ಜನ ಬಿಜೆಪಿಯವರ ಮಾತುಗಳನ್ನು ಕೇಳಲು ಹೋಗಬೇಡಿ ಅವರು ಸುಳ್ಳು ಹೇಳುತ್ತಾರೆ.

ನಾನು ಮುಖ್ಯಮಂತ್ರಿಯಾಗಿರುವಾಗ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಇವರ ಯೋಗ್ಯತೆಗೆ ಒಂದೇ ಒಂದು ಮನೆ ಮಂಜೂರು ಮಾಡಿ ಕಟ್ಟಿಸಿಕೊಟ್ಟಿದ್ದಾರ? 10 ಕೆ.ಜಿ ಅಕ್ಕಿ ಕೊಡಲು ಆಗಲ್ಲ ಎನ್ನುತ್ತಾರೆ, ಹಿಂದೆ 7 ಕೆ.ಜಿ ಕೊಟ್ಟವರಿಗೆ ಈಗ 10 ಕೆ.ಜಿ ಕೊಡೋಕಾಗಲ್ವಾ? ಇನ್ನೊಂದು ಎರಡ್ಮೂರು ಸಾವಿರ ಕೋಟಿ ಹಣ ಹೆಚ್ಚು ಬೇಕಾಗುತ್ತೆ ಅಷ್ಟೆ. 7 ಕೆ.ಜಿ ಕೊಡುವಾಗ 5,000 ಕೋಟಿ ಹತ್ತಿರ ಖರ್ಚು ಬರುತ್ತಿತ್ತು, 10 ಕೆ.ಜಿ ಕೊಟ್ಟರೆ ಇನ್ನೊಂದು 2.000 ಕೋಟಿ ರೂಪಾಯಿ ಜಾಸ್ತಿಯಾಗುತ್ತೆ. ಕರ್ನಾಟಕದ ಬಜೆಟ್‌ ಗಾತ್ರ 3 ಲಕ್ಷದ 10 ಸಾವಿರ ಕೋಟಿ. ಪ್ರತೀ ವರ್ಷ ಬಜೆಟ್‌ ಗಾತ್ರ 30,000 ಕೋಟಿ ಹೆಚ್ಚಾಗುತ್ತದೆ. ಬದ್ಧ ಖರ್ಚುಗಳನ್ನು ಕಡಿಮೆ ಮಾಡಿ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು. ಜನರ ಬಳಿ ಹಣ ಇದ್ದರೆ, ಅವರಲ್ಲಿ ಕೊಂಡುಕೊಳ್ಳುವ ಶಕ್ತಿ ಇದ್ದರೆ ತಾನೇ ಹಣದ ಹರಿವು ಆಗುವುದು. ಜನರ ಬಳಿ ದುಡ್ಡೇ ಇಲ್ಲದೆ ಹೋದೆ ಜನ ಕೊಂಡುಕೊಳ್ಳಲು ಮಾರುಕಟ್ಟೆಗೆ ಹೋಗಲ್ಲ, ಹೀಗಾದರೆ ತೆರಿಗೆ ಸಂಗ್ರಹ ಆಗುವುದಿಲ್ಲ ಎಂದು ಹೇಳಿದ್ದಾರೆ.

ಇದರಿಂದ ನಾವು ಈ ಎಲ್ಲಾ ವಿಚಾರಗಳನ್ನು ಲೆಕ್ಕಾಚಾರ ಹಾಕಿ ನಮ್ಮ ಭರವಸೆಗಳ ಈಡೇರಿಕೆ ಸಾಧ್ಯವಾ ಇಲ್ಲವಾ ಎಂಬುದನ್ನು ತಿಳಿದುಕೊಂಡ ಮೇಲೆಯೇ ನಮ್ಮಿಂದ ಈಡೇರಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿದ್ದೇವೆ. ಈ ವಿಚಾರವನ್ನು ನರೇಂದ್ರ ಮೋದಿ ಅವರಿಗೆ ತಿಳಿಸಲು ಬಯಸುತ್ತೇನೆ. ಮೋದಿ ಅವರು ಕರ್ನಾಟಕದ ಜನರಿಗೆ ತಪ್ಪು ಮಾಹಿತಿ ನೀಡಬೇಡಿ, ನಿಮಗೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮಾಹಿತಿ ಇಲ್ಲ ಎಂದು ಕಾಣುತ್ತದೆ. ನಾವು ನುಡಿದಂತೆ ನಡೆಯುವವರು, ಕೊಟ್ಟ ಭರವಸೆಗಳನ್ನು ಹಿಂದೆಯೂ ಈಡೇರಿಸಿದ್ದೇವೆ, ಮುಂದೆಯೂ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.



Join Whatsapp