Home ಟಾಪ್ ಸುದ್ದಿಗಳು ನಿಗದಿತ ದಿನದಂದು ಚುನಾವಣೆ ಅನುಮಾನ: ಇಮ್ರಾನ್ ಖಾನ್

ನಿಗದಿತ ದಿನದಂದು ಚುನಾವಣೆ ಅನುಮಾನ: ಇಮ್ರಾನ್ ಖಾನ್

ಲಂಡನ್‌: ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾವರ್ತಿಕ ಚುನಾವಣೆ ನಿಗದಿಯಾಗಿದೆ. ಆದರೆ ಅಂದು ಚುನಾವಣೆ ನಡೆಯುವುದು ಅನಮಾನ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಜತೆಗೆ, 2022ರಲ್ಲಿ ತಮ್ಮನ್ನು ಪದಚ್ಯುತಿಗೊಳಿಸಲು ಅಮೆರಿಕದ ಒತ್ತಡ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

‘ಪಾಕಿಸ್ತಾನ ಚುನಾವಣೆಗಳು ಪ್ರಹಸನವಾಗಲಿದೆ’ ಎಂಬ ಶೀರ್ಷಿಕೆಯೊಂದಿಗೆ ಇಮ್ರಾನ್‌ ಖಾನ್‌ ಹೆಸರಲ್ಲಿ ಬ್ರಿಟಿಷ್‌ ಪತ್ರಿಕೆ ‘ದಿ ಎಕನಾಮಿಸ್ಟ್‌’ನಲ್ಲಿ ಶುಕ್ರವಾರ ಲೇಖನವೊಂದು ಪ್ರಕಟಗೊಂಡಿದ್ದು, ಅದರಲ್ಲಿ ಈ ವಿಚಾರಗಳು ಇದ್ದು, ಈ ಆರೋಪಗಳನ್ನು ಪಾಕಿಸ್ತಾನ ಸರ್ಕಾರ ಮತ್ತು ಅಮೆರಿಕ ನಿರಾಕರಿಸಿವೆ.

ಪಾಕಿಸ್ತಾನದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಬರಹದಲ್ಲಿ ಕಟು ಟೀಕೆ ಮಾಡಿದ ಇಮ್ರಾನ್ ಖಾನ್, ತಾನು ಮಾಡುತ್ತಾ ಬಂದಿರುವ ಹಲವು ಆರೋಪಗಳನ್ನು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಮತ್ತು ಸುಧಾರಣೆಗಳನ್ನು ತರಬೇಕಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಅಗತ್ಯವಿದೆ ಬರಹದಲ್ಲಿ ಆಗ್ರಹಿಸಲಾಗಿದೆ. ಪ್ರಜಾಪ್ರಭುತ್ವಕ್ಕೆ ಮುತ್ತಿಗೆ ಹಾಕಲಾಗಿದೆ. ಪಾಕಿಸ್ತಾನವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ವಿಪರೀತ ಚಳಿ ವಾತಾವರಣ ಹಾಗೂ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಫೆಬ್ರವರಿ 8ರಂದು ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡುವ ನಿರ್ಣಯಕ್ಕೆ ಪಾಕಿಸ್ತಾನ ಸೆನೆಟ್‌ ಶುಕ್ರವಾರ ಅಂಗೀಕಾರ ನೀಡಿದೆ.

ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಇಮ್ರಾನ್ ಖಾನ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿದ್ದು, ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿನ ಪ್ರಕರಣವೂ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Join Whatsapp
Exit mobile version