Home ಟಾಪ್ ಸುದ್ದಿಗಳು ಚುನಾವಣಾ ಪ್ರಚಾರ ರ್ಯಾಲಿಗೆ ನಿರ್ಬಂಧ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಹೋಗಲು ನಿರ್ಧರಿಸಿದ ಚುನಾವಣಾ ಆಯೋಗ

ಚುನಾವಣಾ ಪ್ರಚಾರ ರ್ಯಾಲಿಗೆ ನಿರ್ಬಂಧ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಹೋಗಲು ನಿರ್ಧರಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭೌತಿಕ ರಾಜಕೀಯ ರ್ಯಾಲಿಗಳನ್ನು ನಿರ್ಬಂಧಿಸಿದ ಮಧ್ಯಪ್ರದೇಶ ಹೈಕೋರ್ಟ್ ನಿರ್ಣಯದ ವಿರುದ್ಧ ಚುನಾವಣಾ ಆಯೋಗ ಸುಪ್ರೀಂ ಕೋರ್ಟನ್ನು ಸಂಪರ್ಕಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಇಬ್ಬರು ಬಿಜೆಪಿ ಅಭ್ಯರ್ಥಿಗಳೂ ಪರಮೋಚ್ಛ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

ತಾವು ಇತರ ವಿಧಾನಗಳ ಚುನಾವಣಾ ಪ್ರಚಾರ ಸಾಧ್ಯವಿಲ್ಲವೆಂಬುದನ್ನು ಸಾಬೀತುಪಡಿಸುವ ತನಕ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷಗಳಿಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿಯನ್ನು ನೀಡದಂತೆ ತನ್ನ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಮ್ಯಾಜಿಸ್ಟ್ರೇಟ್ ಗಳಿಗೆ ಹೈಕೋರ್ಟ್ ನ ಗ್ವಾಲಿಯಾರ್ ಪೀಠ ಸೂಚನೆ ನೀಡಿತ್ತು.  

ಚುನಾವಣೆಯನ್ನು ನಡೆಸುವುದು ತನ್ನ ವ್ಯಾಪ್ತಿಯ ವಿಷಯವಾಗಿರುವುದರಿಂದ ಹೈಕೋರ್ಟ್ ಆದೇಶವು ತನ್ನ ಚುನಾವಣಾ ಪ್ರಕ್ರಿಯೆಯ ಮೇಲೆ ಹಸ್ತಕ್ಷೇಪವನ್ನು ಮಾಡುತ್ತದೆ ಎಂದು ಚುನಾವಣಾ ಆಯೋಗ ಸುಪ್ರೀಂಗೆ ತಿಳಿಸಿದೆ. ಈ ದಮನವು ಕಣದಲ್ಲಿರುವ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ಹೇಳಿದೆ.

ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮಧ್ಯಪ್ರದೇಶ ರಾಜ್ಯ ಸರಕಾರ ಕೂಡ ನಿರ್ಧರಿಸಿದೆ. ತಾನು ಎರಡು ರ್ಯಾಲಿಗಳನ್ನು ನಡೆಸಲುದ್ದೇಶಿಸಿದ್ದ ಆಶೋಕ್ ನಗರದ ಶದೋರಾ ಮತ್ತು ಭಂದರ್ ಜನತೆಯೊಂದಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ವೀಡಿಯೊ ಸಂದೇಶವೊಂದರ ಮೂಲಕ ಕ್ಷಮೆ ಕೋರಿದ್ದಾರೆ. ನ್ಯಾಯಾಲಯದ ಆದೇಶದ ಬಳಿಕ ರ್ಯಾಲಿಗಳನ್ನು ರದ್ದುಗಳಿಸಬೇಕಾಗಿ ಬಂದಿತ್ತು.

“ನಾವು ಹೈಕೋರ್ಟ್ ಮತ್ತು ಅದರ ನಿರ್ಣಯವನ್ನು ಗೌರವಿಸುತ್ತೇವೆ. ಈ ನಿರ್ಣಯದ ಕುರಿತು ನಾವು ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ. ಯಾಕೆಂದರೆ ಇದು ಒಂದೇ ಭೂಮಿಯಲ್ಲಿ ಎರಡು ಕಾನೂನನ್ನು ಹೊಂದಿದಂತೆ” ಎಂದು ಚೌಹಾನ್ ಹೇಳಿರುವುದಾಗಿ ಎ.ಎನ್.ಐ ವರದಿ ಮಾಡಿದೆ.

“ಮಧ್ಯಪ್ರದೇಶಾದ ಕೆಲವು ಕಡೆ ಭೌತಿಕ ರ್ಯಾಲಿಗಳು ನಡೆಯುತ್ತವೆ ಮತ್ತು ಇನ್ನು ಕೆಲವು ಕಡೆ ಅದಕ್ಕೆ ಅನುಮತಿಯಿಲ್ಲ. ಬಿಹಾರದಲ್ಲಿ ರಾಜಕೀಯ ರ್ಯಾಲಿಗಳು ನಡೆದರೂ ಮಧ್ಯಪ್ರದೇಶದ ಒಂದು ಭಾಗದಲ್ಲಿ ಅದಕ್ಕೆ ಅನುಮತಿಯಿಲ್ಲ. ಹಾಗಾಗಿ ನಾವು ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯವನ್ನು ಕೋರುತ್ತೇವೆ” ಎಂದು ಅವರು ಹೇಳಿದರು.

ಬುಧವಾರದಂದು, ಕೇಂದ್ರ ಸಚಿವ ನರೇಂದ್ರ ಸಿಂಗ್ ಥೋಮರ್ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಆದೇಶಿಸುವ ಸಂದರ್ಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ರಾಜಕೀಯ ರ್ಯಾಲಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು.

Join Whatsapp
Exit mobile version