ಬೆಂಗಳೂರು : ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ರಾಜಕಾಲುವೆ ಸ್ವಚ್ಛಗೊಳಿಸುವ ಇಬ್ಬರು ಕೂಲಿಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಕಲಾಸಿಪಾಳ್ಯದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಿಯಪ್ಪ (22) ಹಾಗೂ ನಾಗರಾಜು (19) ಮೃತ ದುರ್ದೈವಿಗಳು. ಒಜಾಸ್ ಎನ್ನುವ ಕಂಪನಿಯಲ್ಲಿ ಕಳೆದೊಂದು ವರ್ಷದಿಂದ ಇವರಿಬ್ಬರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡಿಕೊಂಡಿದ್ದ ಇವರಿಬ್ಬರು ನಿನ್ನೆ ಮಲ್ಲಸಂದ್ರ ಬಳಿಯ ರಾಜಕಾಲುವೆ ಕೆಲಸ ಮುಗಿಸಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದರು.
ಈ ವೇಳೆ ಲಾಲ್‌ಬಾಗ್ ರಸ್ತೆಯ ನಾಲೆಯ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಸಂಗಡಿಗರನ್ನು ಕರೆದೊಯ್ಯಲು ಬಂದಿದ್ದ ಇವರಿಬ್ಬರೂ ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ನಾಲೆಯ ಕಾಲುವೆಗೆ ಅಳವಡಿಸಿದ ಮೇಷ್ ಬಳಿ ಮೂತ್ರ ವಿಸರ್ಜನೆ ಮಾಡುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.ಕಾಲುವೆ ಮೇಷ್ ಗೆ ಹೈಟೆನ್ಶನ್ ವಿದ್ಯುತ್ ಹರಿಯುತ್ತಿದ್ದ ತಂತಿಯು ತಗುಲಿ ಅದರಿಂದ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಲಾಸಿಪಾಳ್ಯ ಪೊಲೀಸರು ಪರಿಶೀಲನೆ ನಡೆಸಿ ವಿದ್ಯುತ್ ಹರಿಯಲು ನಿರ್ಲಕ್ಷ್ಯ ವಹಿಸಿದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.