ಆಗ್ರಾ : ದೇಶದಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು ಇದರಲ್ಲಿ ಉತ್ತರ ಪ್ರದೇಶವು ಹೊರತಾಗಿಲ್ಲ, ಉತ್ತರ ಪ್ರದೇಶದಲ್ಲಿ ಆಮ್ಲಜನಕದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ ಬೆನ್ನಲ್ಲೇ ಆಗ್ರಾದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಗದೇ ಎಂಟು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಮ್ಲಜನಕದ ಕೊರತೆಯಿಂದಾಗಿ ಆಗ್ರಾದ ಪ್ಯಾರಾಸ್ ಆಸ್ಪತ್ರೆಯಲ್ಲಿ ಎಂಟು ಸೋಂಕಿತರು ಸಾವಿಗೀಡಾಗಿದ್ದಾರೆ . ಹೀಗಾಗಿ ನಾವು ಸರಕಾರವನ್ನು ಎಚ್ಚರಿಸಿದ್ದೇವೆ ಎಂದು ಅಸ್ಪತ್ರೆಯ ಸಿಬ್ಬಂದಿ ಚತುರ್ವೇದಿ ಹೇಳಿದ್ದಾರೆ.
ರೋಗಿಗಳ ಹಠಾತ್ ಹೆಚ್ಚಳವೇ ಆಮ್ಲಜನಕದ ಕೊರತೆಗೆ ಕಾರಣವಾಗಿದ್ದು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ಸಿಂಗ್ ಹೇಳಿದ್ದಾರೆ. ಇನ್ನು ಆಗ್ರಾದ ಬಹುತೇಕ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಹಾಸಿಗೆಗಳು ಲಭ್ಯವಿಲ್ಲ ಎಂದು ಆವರಣದ ಹೊರಗೆ ಪೋಸ್ಟರ್ ಗಳನ್ನು ಹಾಕಲು ಪ್ರಾರಂಭಿಸಿದ್ದು ತಮ್ಮ ಕುಟುಂಬದ ಸದಸ್ಯರಿಗೆ ತಮ್ಮದೇ ಆದ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡುವಂತೆಯೂ ಸೂಚಿಸಿದೆ.