ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನವು ಆಟಕ್ಕೆ ಸೀಮಿತವಾಗಿದ್ದು, ಅಲ್ಲಿ ಯಥಾಸ್ಥಿತಿ ಕಾಪಾಡಬೇಕು. ರಮಝಾನ್ ಮತ್ತು ಬಕ್ರೀದ್ ನಲ್ಲಿ ಮಾತ್ರ ಪಾರ್ಥನೆ ಸಲ್ಲಿಸಲು ಮುಸ್ಲಿಮ್ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ.
ಮೈದಾನವು ಆಟಕ್ಕೆ ಸೀಮಿತವಾಗಿದ್ದು, ಅಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಆದೇಶಿಸಿದ ಕರ್ನಾಟಕ ಹೈಕೋರ್ಟ್. ರಮಝಾನ್ ಮತ್ತು ಬಕ್ರೀದ್ ನಲ್ಲಿ ಮಾತ್ರ ಪಾರ್ಥನೆ ಸಲ್ಲಿಸಲು ಮುಸ್ಲಿಮ್ ಸಮುದಾಯಕ್ಕೆ ಅವಕಾಶ ನೀಡಿದೆ. ಈ ನಿಯಮ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿದೆ.
ಇದರಿಂದ ಗಣೇಶ ಉತ್ಸವ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಅಲ್ಲಿ ಅವಕಾಶವಿಲ್ಲದಂತಾಗಿದೆ. ಈ ಮೂಲಕ ಸಂಘಪರಿವಾರ ಸಂಘಟನೆಗಳಿಗೆ ಹಿನ್ನಡೆಯಾದಂತಾಗಿದೆ.
ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆ. 6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ವಾದ ಮಂಡಿಸಿ, ಬಿಬಿಎಂಪಿ ಜಂಟಿ ಆಯುಕ್ತರು ವ್ಯಾಪ್ತಿ ಇಲ್ಲದೇ ಆದೇಶ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಈ ಹಿಂದೆಯೇ ಪ್ರಕರಣ ನಿರ್ಧರಿಸಿದೆ. ಆಕ್ಷೇಪಾರ್ಹವಾದ ಭೂಮಿಯು ವಕ್ಫ್ ಮಂಡಳಿಗೆ ಸೇರಿದೆ ಎಂದು ತೀರ್ಮಾನವಾಗಿದೆ. ಈಗ ವಕ್ಫ್ ಮಂಡಳಿ ಅಧಿಸೂಚನೆ ಪ್ರಶ್ನಿಸಿದೇ ಸರ್ಕಾರ ಅಥವಾ ಬಿಬಿಎಂಪಿ ಹಕ್ಕು ಸಾಧಿಸಲಾಗದು ಎಂದು ಹೇಳಿದರು.
ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡಬೇಡಿ. ಮೈದಾನವಾಗಿರುವುದರಿಂದ ಯಥಾಸ್ಥಿತಿ ಕಾಪಾಡಿ ಎಂದು ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ ಪೀಠ, ವಿಚಾರಣೆಯನ್ನು ಮುಂದೂಡಿದೆ.