ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಹೀನಾಯ ಸೋಲಿನ ಕುರಿತಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ “ಪ್ರಜಾಪ್ರಭುತ್ವದಲ್ಲಿ ಜನರ ಮತಗಳು ಅತ್ಯುನ್ನತವಾಗಿದೆ. ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಚುನಾವಣೆಗಾಗಿ ಶ್ರಮಿಸಿದರು, ಸಂಘಟನೆಯನ್ನು ಕಟ್ಟಿದರು, ಜನರ ಸಮಸ್ಯೆಗಳ ಬಗ್ಗೆಯೂ ಧ್ವನಿಯೆತ್ತಿದರು ಆದರೆ ಪ್ರಯತ್ನಗಳನ್ನು ಮತಗಳಾಗಿ ಪರಿವರ್ತಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಿಯಾಂಕ, ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶ ಮತ್ತು ಸಾರ್ವಜನಿಕರ ಒಳಿತಿಗಾಗಿ ಧನಾತ್ಮಕ ಅಜೆಂಡಾವನ್ನು ಅನುಸರಿಸುತ್ತಿದೆ ಎಂದಿದ್ದಾರೆ. ಪ್ರತಿಪಕ್ಷದ ಕರ್ತವ್ಯವನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ಕಾಂಗ್ರೆಸ್ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳಲ್ಲಷ್ಟೆ ಗೆಲುವನ್ನು ಕಂಡಿದೆ.