Home ಟಾಪ್ ಸುದ್ದಿಗಳು ಹಿಜಾಬ್ ವಿಚಾರದಲ್ಲಿ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂಬ ಶಿಕ್ಷಣ ಸಚಿವರ ನಿಲುವು...

ಹಿಜಾಬ್ ವಿಚಾರದಲ್ಲಿ ಪರೀಕ್ಷೆ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂಬ ಶಿಕ್ಷಣ ಸಚಿವರ ನಿಲುವು ಖಂಡನೀಯ: ಕ್ಯಾಂಪಸ್ ಫ್ರಂಟ್

ಬೆಂಗಳೂರು: ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕನ್ನು ನೀಡಿದೆ. ಆದರೆ ಈ ಹಕ್ಕನ್ನು ಕಸಿದಿರುವ ರಾಜ್ಯ ಸರಕಾರದ ಅನ್ಯಾಯದ ಕ್ರಮವನ್ನು ಪ್ರತಿಭಟಿಸಿದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇದೀಗ  ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ ನಡೆಸುವುದಿಲ್ಲ ಎಂದಿರುವ ಶಿಕ್ಷಣ ಸಚಿವರ ನಿಲುವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.

ಪದವಿ ಪೂರ್ವ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರಕಾರವು ಚೆಲ್ಲಾಟವಾಡುತ್ತಿದ್ದು, ಇಂದು ರಾಜ್ಯದಲ್ಲಿ ಹಲವಾರು ಮುಸ್ಲಿಮ್ ವಿದ್ಯಾರ್ಥಿನಿಯರು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಸಚಿವರ ಹೇಳಿಕೆಯನ್ನು ಗಮನಿಸಿದರೆ, ಮುಸ್ಲಿಮ್ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿಸಿ ಅವರ ಸಾಕ್ಷರತಾ ಪ್ರಮಾಣವನ್ನು ಕಡಿಮೆ ಮಾಡಬೇಕೆಂಬ ದುರುದ್ದೇಶ ಅವರ ಹೇಳಿಕೆಯಲ್ಲಿ ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದರು.

ಶಿಕ್ಷಣವು ಪ್ರತಿಯೊಬ್ಬ ಪ್ರಜೆಗಳ ಮೂಲಭೂತ ಹಕ್ಕು, ಇದನ್ನು ಕಸಿಯಲು ಸಂವಿಧಾನ ಯಾರಿಗೂ ಅನುಮತಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರವು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಹಾಗೆಯೇ ಸರಕಾರವು ವಿದ್ಯಾರ್ಥಿಗಳ ಧಾರ್ಮಿಕ ಹಾಗೂ ಶಿಕ್ಷಣದ ಮೂಲಭೂತ ಹಕ್ಕನ್ನು ಖಾತರಿಪಡಿಸಬೇಕೆಂದು ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp
Exit mobile version