Home ಟಾಪ್ ಸುದ್ದಿಗಳು ಇ.ಡಿ ಅಧಿಕಾರಿ ರಾಜೇಶ್ವರಿ ಸಿಂಗ್ ನಿವೃತ್ತಿಗೆ ಅರ್ಜಿ: ಯುಪಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ

ಇ.ಡಿ ಅಧಿಕಾರಿ ರಾಜೇಶ್ವರಿ ಸಿಂಗ್ ನಿವೃತ್ತಿಗೆ ಅರ್ಜಿ: ಯುಪಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ

ಕಾನ್ಪುರ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿ ರಾಜೇಶ್ವರಿ ಸಿಂಗ್ ಸರ್ಕಾರಿ ಸೇವೆಗೆ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂಬರುವ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದಾರೆಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಪ್ರಸ್ತುತ ಸಿಂಗ್ ಅವರು ಲಕ್ನೋದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಜಂಟಿ ನಿರ್ದೆಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ವಿಭಾಗದಲ್ಲಿ ಬಿಟೆಕ್ ಮತ್ತು ಪಿ.ಎಚ್.ಡಿ ಪದವೀಧರರಾಗಿರುವ ಸಿಂಗ್ ಅವರು ರಾಜ್ಯ ಪೊಲೀಸ್ ಸೇವಾ ಅಧಿಕಾರಿಯಾಗಿ ತನ್ನ ವೃತಿಯನ್ನು ಆರಂಭಿಸಿದ್ದರು. ನಂತರ 2009 ರಲ್ಲಿ ಮನಿ ಲಾಂಡರಿಂಗ್ ವಿರೋಧಿ ತನಿಖಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು.

ಸರ್ಕಾರಿ ಸೇವೆಯಿಂದ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಮಾತ್ರವಲ್ಲ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರುವ ಸಾಧ್ಯತೆಯಿದೆ. ಮುಂದಿನ ವರ್ಷ ನಡೆಯುವ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.

2ಜಿ ಸ್ಪೆಕ್ಟ್ರಮ್ ಪ್ರಕರಣ, 2010 ರ ಕಾಮನ್ ವೆಲ್ತ್ ಗೇಮ್ಸ್ ಹಗರಣ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ವಿರುದ್ಧ ತನಿಖೆಯಂತಹ ಪ್ರಮುಖ ಮತ್ತು ಉನ್ನತ ಮಟ್ಟದ ತನಿಖೆಯ ನೇತೃತ್ವವನ್ನು ಸಿಂಗ್ ಅವರಿಗೆ ವಹಿಸಲಾಗಿತ್ತು. ಮಾತ್ರವಲ್ಲದೆ ಇಡಿ ಯ ಪ್ರಧಾನ ತನಿಖಾ ಘಟಕದ ನೇತೃತ್ವ ವಹಿಸಿದ್ದರು. ಈ ಘಟಕವು ರಾಜಕಾರಣಿಗಳ ಅಕ್ರಮ ಹಣ ಸಂಪಾದನೆ, ವರ್ಗಾವಣೆ ಮತ್ತು ವಿನಿಮಯ ಉಲ್ಲಂಘನೆ ಪ್ರಕರಣವನ್ನು ತನಿಖೆ ಮಾಡುವ ಸಂಸ್ಥೆಯಾಗಿದೆ.

ಕರ್ತವ್ಯದಲ್ಲಿದ್ದಾಗ ಹಲವು ಎನ್ ಕೌಂಟರ್ ನಡೆಸಿದ ಸಿಂಗ್ ಅವರು ಪ್ರಸ್ತುತ ಲಕ್ನೋ ವ್ಯಾಪ್ತಿಯ ಇನ್ಸ್ ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಲಕ್ಷ್ಮೀ ಸಿಂಗ್ ಅವರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ.

ರಾಜಕಾರಣಿ, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ತನ್ನ ಸೈದ್ದಾಂತಿಕ ವಿರೋಧಿಗಳನ್ನು ಹೆಣೆಯಲು ಇಡಿ ಎಂಬ ತನಿಖಾ ಸಂಸ್ಥೆಯನ್ನು ಬಿಜೆಪಿ ಸರ್ಕಾರ ದುರುಪಯೋಗ ಪಡಿಸುತ್ತಿದೆಯೆಂಬ ಆರೋಪದ ಮಧ್ಯೆ ರಾಜೇಶ್ವರಿ ಸಿಂಗ್ ಅವರ ಬಿಜೆಪಿ ಸೇರ್ಪಡೆ ರಾಷ್ಟ್ರ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

Join Whatsapp
Exit mobile version