Home ಟಾಪ್ ಸುದ್ದಿಗಳು ಮೂರನೇ ಬಾರಿಗೆ ಇ ಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ವಿಸ್ತರಣೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ...

ಮೂರನೇ ಬಾರಿಗೆ ಇ ಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ವಿಸ್ತರಣೆ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಮೂರನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಆರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಬಾಹ್ಯ ಕಾರಣಗಳಿಗಾಗಿ ಮೂರನೇ ಬಾರಿಗೆ ಅಧಿಕಾರಾವಧಿ ವಿಸ್ತರಣೆ ಮಾಡಿರುವುದು ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತದೆ ಮತ್ತು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಣಿಗೆಯನ್ನು ನಾಶಪಡಿಸುತ್ತದೆ ಎಂದು ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್‌ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ದೂರಲಾಗಿತ್ತು.

ಮಿಶ್ರಾ ಅವರ ಅಧಿಕಾರಾವಧಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಈಗಾಗಲೇ ಕೆಲ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು ಮತ್ತೆ ಮಿಶ್ರಾ ಅವರ ಅಧಿಕಾರಾವಧಿಯನ್ನು ಮತ್ತೆ ವಿಸ್ತರಿಸದಂತೆ ಸೆಪ್ಟೆಂಬರ್ 2021 ರಲ್ಲಿ ತೀರ್ಪು ನೀಡಿತ್ತು.

ಮಿಶ್ರಾ ಅವರು ನವೆಂಬರ್ 2018 ರಲ್ಲಿ ಎರಡು ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಈ ಅವಧಿ ನವೆಂಬರ್ 2020 ರಲ್ಲಿ ಮುಕ್ತಾಯಗೊಂಡಿತ್ತು. ಮೇ 2020 ರಲ್ಲಿ, ಅವರು 60 ರ ನಿವೃತ್ತಿ ವಯಸ್ಸನ್ನು ತಲುಪಿದ್ದರು.

ಆದರೂ, ನವೆಂಬರ್ 13, 2020 ರಂದು,  ಕಚೇರಿ ಆದೇಶ ಹೊರಡಿಸಿದ, ಕೇಂದ್ರ ಸರ್ಕಾರ ರಾಷ್ಟ್ರಪತಿಗಳು 2018ರ ಆದೇಶವನ್ನು ಪೂರ್ವಾನ್ವಯವಾಗುವಂತೆ ಮಾರ್ಪಡಿಸಿದ್ದಾರೆ ಎಂಬುದಾಗಿ ತಿಳಿಸಿ ‘ಎರಡು ವರ್ಷಗಳ’ ಅವಧಿಯನ್ನು ‘ಮೂರು ವರ್ಷಗಳ’ ಅವಧಿಗೆ ಬದಲಿಸಿರುವುದಾಗಿ ಹೇಳಿತ್ತು. ಇದನ್ನು ಸರ್ಕಾರೇತರ ಸಂಸ್ಥೆ ʼಕಾಮನ್ ಕಾಸ್ʼ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಮತ್ತೆ ಅವರ ಅಧಿಕಾರಾವಧಿ ವಿಸ್ತರಿಸದಂತೆ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿಯೂ ಕೇಂದ್ರ ವಿಚಕ್ಷಣಾ ಆಯೋಗ ಕಾಯಿದೆಗೆ ತಿದ್ದುಪಡಿ ತಂದ ಕೇಂದ್ರ ಸರ್ಕಾರ ಇ ಡಿ ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷ ವಿಸ್ತರಿಸಲು ಸ್ವತಃ ಅಧಿಕಾರ ಪಡೆದುಕೊಂಡಿತ್ತು. ಇದನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದು ವಿಚಾರಣೆ ಬಾಕಿ ಇದೆ.

(ಕೃಪೆ: ಬಾರ್&ಬೆಂಚ್)

Join Whatsapp
Exit mobile version