Home ಟಾಪ್ ಸುದ್ದಿಗಳು ಏಕನಾಥ್ ಶಿಂಧೆ ಬಣಕ್ಕೆ ‘ಬಿಲ್ಲು ಬಾಣ’ ಚಿಹ್ನೆ ನೀಡಿ ಚುನಾವಣಾ ಆಯೋಗ ಆದೇಶ

ಏಕನಾಥ್ ಶಿಂಧೆ ಬಣಕ್ಕೆ ‘ಬಿಲ್ಲು ಬಾಣ’ ಚಿಹ್ನೆ ನೀಡಿ ಚುನಾವಣಾ ಆಯೋಗ ಆದೇಶ

ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ‘ಬಿಲ್ಲು ಬಾಣ’ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿ ಆದೇಶ ಹೊರಡಿಸಿದೆ.

ಉದ್ಧವ್ ಠಾಕ್ರೆ ಹಾಗೂ ಏನಕಾಥ್ ಶಿಂಧೆ ಬಣಗಳ ನಡುವೆ ಶಿವಸೇನಾ ಚಿಹ್ನೆಗಾಗಿ ನಡೆದ ಹೋರಾಟದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ವಿಚಾರಣೆ ನಡೆಸಿದ್ದು, ಎರಡು ಬಣದ ವಾದ ಆಲಿಸಿದ್ದ ಕೇಂದ್ರ ಚುನಾವಣಾ ಆಯೋಗ, ಅಂತಿಮವಾಗಿ ಶುಕ್ರವಾರ(ಫೆ.17) ಶಿವಸೇನೆಯ ‘ಬಿಲ್ಲು ಬಾಣ’ ಚಿಹ್ನೆಯನ್ನು ಏಕನಾಥ್ ಶಿಂಧೆ ಬಣಕ್ಕೆ ನೀಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಉದ್ಧವ್ ಠಾಕ್ರೆಗೆ ತೀವ್ರ ಹಿನ್ನಡೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಉದ್ಧವ್ ಬಣದ ನಾಯಕ ಸಂಜಯ್ ರಾವತ್, ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ. ಪಕ್ಷದ ಚಿಹ್ನೆ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಆದೇಶ ನೀಡಿದೆ ಚುನಾವಣಾ ಆಯೋಗದ ಆದೇಶವನ್ನು ‘ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಬಣದ ಇನ್ನೋರ್ವ ನಾಯಕ ಆನಂದ್ ದುಬೆ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ಆದೇಶದ ಬಗ್ಗೆ ನಮಗೆ ಅನುಮಾನವಿತ್ತು. ನಾವು ಚುನಾವಣಾ ಆಯೋಗವನ್ನು ನಂಬುವುದಿಲ್ಲ. ಇದೇ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಈ ಮಧ್ಯೆ ಚುನಾವಣಾ ಆಯೋಗ ಆತುರದ ನಿರ್ಧಾರ ಮಾಡಿದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡಿದೆ. ನಾವು ಆಯೋಗ ಕ್ರಮವನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದರು. ಬಳಿಕ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿದ್ದರು. ನಂತರ ಚಿಹ್ನೆಗಾಗಿ ಎರಡು ಬಣಗಳ ನಡುವೆ ಹೋರಾಟ ಶುರುವಾಗಿತ್ತು.

ಈ ಹಿಂದೆ ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಬಣಗಳು ಶಿವಸೇನೆ ಚಿಹ್ನೆ ಬಳಸಬಾರದು ಎಂದು ಚುನಾವಣಾ ಆಯೋಗ ಸೂಚನೆ ನೀಡಿತ್ತು.

Join Whatsapp
Exit mobile version