Home ಟಾಪ್ ಸುದ್ದಿಗಳು ಚಿಕನ್, ಮಟನ್, ಮೀನಿಗಿಂತ ಬೀಫ್ ತಿನ್ನಿ: ಬಿಜೆಪಿ ಸಚಿವ ಕರೆ

ಚಿಕನ್, ಮಟನ್, ಮೀನಿಗಿಂತ ಬೀಫ್ ತಿನ್ನಿ: ಬಿಜೆಪಿ ಸಚಿವ ಕರೆ

ಶಿಲ್ಲಾಂಗ್, ಜು.31: ಜನರು ಕೋಳಿ, ಕುರಿ ಮತ್ತು ಮೀನುಗಳಿಗಿಂತ ಹೆಚ್ಚು ಗೋಮಾಂಸವನ್ನು ತಿನ್ನಬೇಕು ಎಂದು ಮೇಘಾಲಯ ಬಿಜೆಪಿ ಸರ್ಕಾರದ ಸಚಿವ ಸಂಬೋರ್ ಶುಲ್ಲೈ ಕರೆ ನೀಡಿದ್ದಾರೆ.


ಕಳೆದ ವಾರ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಹಿರಿಯ ನಾಯಕ ಸಂಬೋರ್ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಸ್ವತಂತ್ರರು ಎಂದು ಹೇಳಿದ್ದಾರೆ.


ನಾನು ಜನರನ್ನು ಚಿಕನ್, ಮಟನ್ ಅಥವಾ ಮೀನಿಗಿಂತ ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರನ್ನು ಹೆಚ್ಚು ಗೋಮಾಂಸ ತಿನ್ನಲು ಪ್ರೋತ್ಸಾಹಿಸುವ ಮೂಲಕ, ಬಿಜೆಪಿ ಗೋಹತ್ಯೆಯ ಮೇಲೆ ನಿಷೇಧ ಹೇರುತ್ತದೆ ಎಂಬ ತಪ್ಪು ಭಾವನೆಯನ್ನು ಹೋಗಲಾಡಿಸಬಹುದು ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.


ನೆರೆಯ ಅಸ್ಸಾಂ ರಾಜ್ಯದ ನೂತನ ಗೋ ಹತ್ಯೆ ನಿಷೇಧ ಕಾನೂನು ಮೇಘಾಲಯಕ್ಕೆ ಜಾನುವಾರು ಸಾಗಾಣಿಕೆಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತುಕತೆ ನಡೆಸುವುದಾಗಿಯೂ ಪಶು ಸಂಗೋಪನೆ ಸಚಿವರಾಗಿರುವ ಸಂಬೋರ್ ಭರವಸೆ ನೀಡಿದ್ದಾರೆ.


ಮೇಘಾಲಯ ಮತ್ತು ಅಸ್ಸಾಂ ನಡುವಿನ ಗಡಿ ವಿವಾದದ ಬಗ್ಗೆ ಮಾತನಾಡಿದ ಸಚಿವರು, ಜನರನ್ನು ರಕ್ಷಿಸಲು ರಾಜ್ಯವು ತನ್ನ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಸಮಯ ಸನ್ನಿಹಿತವಾಗಿದೆ ಎಂದು ಹೇಳಿದರು.
ಅಸ್ಸಾಂನ ಜನರು ಗಡಿ ಪ್ರದೇಶದಲ್ಲಿ ನಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದರೆ, ನಾವು ಅವರಿಗೆ ಸ್ಥಳದಲ್ಲೇ ತಿರುಗೇಟು ನೀಡಬೇಕು ಎಂದು ಅವರು ಕರೆ ನೀಡಿದರು.,

Join Whatsapp
Exit mobile version