ನವದೆಹಲಿ: ಪ್ರಕರಣಗಳ ತುರ್ತು ಪಟ್ಟಿಗೆ ಮತ್ತು ವಿಚಾರಣೆಗೆ ಇನ್ನು ಮುಂದೆ ಮೌಖಿಕ ಮನವಿಗಳನ್ನು ಅನುಮತಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಘೋಷಿಸಿದ್ದಾರೆ.
ಅಂತಹ ಪ್ರಕರಣಗಳಿಗಾಗಿ ವಕೀಲರು ಇ-ಮೇಲ್ ಅಥವಾ ಲಿಖಿತ ಪತ್ರಗಳ ಮೂಲಕ ವಿನಂತಿಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಸೂಚಿಸಿದ್ದಾರೆ.
ಸಾಂಪ್ರದಾಯಿಕವಾಗಿ, ವಕೀಲರು ತಮ್ಮ ಪ್ರಕರಣಗಳನ್ನು ಸಿಜೆಐ ನೇತೃತ್ವದ ಪೀಠದ ಮುಂದೆ ಪ್ರತಿನಿತ್ಯದ ವಿಚಾರಣೆಯ ಪ್ರಾರಂಭದಲ್ಲಿ ತುರ್ತು ಆಧಾರದ ಮೇಲೆ ಔಟ್-ಆಫ್-ಟರ್ನ್ ಪಟ್ಟಿಗಳು ಮತ್ತು ವಿಚಾರಣೆಗಳನ್ನು ಕೋರುತ್ತಿದ್ದರು. ಇನ್ನು ಮುಂದೆ ಯಾವುದೇ ಲಿಖಿತ ಅಥವಾ ಮೌಖಿಕ ಉಲ್ಲೇಖಗಳನ್ನು ಪರಿಗಣಿಸುವುದಿಲ್ಲ. ತುರ್ತು ಕಾರಣಗಳನ್ನು ತಿಳಿಸಿ ಇ-ಮೇಲ್‌ಗಳು ಅಥವಾ ಲಿಖಿತ ಸ್ಲಿಪ್‌ಗಳು ಅಥವಾ ಪತ್ರಗಳನ್ನು ಸಲ್ಲಿಸಿದರೆ ಮಾತ್ರ ಅದನ್ನು ಸ್ವೀಕರಿಸಲಾಗುತ್ತದೆ ಎಂದು ಸಿಜೆಐ ಹೇಳಿದ್ದಾರೆ.
ನ್ಯಾಯಾಂಗ ಸುಧಾರಣೆಗಳಿಗೆ ಜನಕೇಂದ್ರಿತ ಕಾರ್ಯಸೂಚಿಯ ಮಹತ್ವವನ್ನು ಪುನರುಚ್ಚರಿಸಿದ್ದಾರೆ. ಜನರ ಸ್ಥಾನಮಾನವನ್ನು ಲೆಕ್ಕಿಸದೆ ಅವರಿಗೆ ಸುಲಭವಾಗಿ ನ್ಯಾಯ ಸಿಗುವಂತೆ ಮಾಡಲು ಮತ್ತು ಸಮಾನತೆಯನ್ನು ಖಚಿತಪಡಿಸುವುದು ನ್ಯಾಯಾಂಗದ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದರು.