Home ಟಾಪ್ ಸುದ್ದಿಗಳು ಆಸ್ತಿ ಗಳಿಕೆ ವಿಚಾರವಾಗಿ ಇ.ಡಿ. ತನಿಖೆ ಆಶ್ಚರ್ಯ ಮೂಡಿಸಿದೆ: ಡಿ.ಕೆ. ಶಿವಕುಮಾರ್

ಆಸ್ತಿ ಗಳಿಕೆ ವಿಚಾರವಾಗಿ ಇ.ಡಿ. ತನಿಖೆ ಆಶ್ಚರ್ಯ ಮೂಡಿಸಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ಇ.ಡಿ. ಅಧಿಕಾರಿಗಳು ಐಎಂಎ ವಿಚಾರಕ್ಕೆ ದಾಳಿ ಮಾಡಿಲ್ಲ, ಆಸ್ತಿ ವಿಚಾರವಾಗಿ ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರಾದ ಜಮೀರ್ ಅಹಮದ್ ಅವರು ಹೇಳಿದ್ದಾರೆ. ಆಸ್ತಿ ಗಳಿಕೆ ವಿಚಾರವಾಗಿ ಆದಾಯ ಇಲಾಖೆ (IT) ಬದಲು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.


ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಈ ದಾಳಿಗೂ ಐಎಂಎ ವಿಚಾರಕ್ಕೂ ಸಂಬಂಧವಿಲ್ಲ. ನನ್ನ ಆಸ್ತಿ ವಿಚಾರವಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರು ಹೇಳಿದ್ದಾರೆ. ಜಮೀರ್ ಅಹಮದ್ ಖಾನ್ ಅವರು ಹಿಂದೆ ವಿಧಾನಸೌಧದಲ್ಲಿ ಮಾತನಾಡಿ ಐಎಂಎ ಪ್ರಕರಣದಲ್ಲಿ ನಷ್ಟ ಅನುಭವಿಸಿರುವ 40 ಸಾವಿರ ಜನರಿಗೂ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದ್ದರು. ಇದು ನಮ್ಮ ಪಕ್ಷದ ನಿಲುವೂ ಆಗಿದೆ ಎಂದರು.


ಆದಾಯ, ಆಸ್ತಿ ವಿಚಾರವಾಗಿ ಇ.ಡಿ. ಅಧಿಕಾರಿಗಳು ದಾಳಿ ಮಾಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ. ಆದಾಯ ತೆರಿಗೆ ಇಲಾಖೆಗೆ ಈ ವಿಚಾರದಲ್ಲಿ ದಾಳಿ ಮಾಡುವ ಅಧಿಕಾರ ಇದೆ. ಇ.ಡಿ.ಗೆ ಹಣದ ಅವ್ಯವಹಾರದ ಬಗ್ಗೆ ತನಿಖೆ ಮಾಡುವ ಅಧಿಕಾರ ಇದೆ. ನನಗಿರುವ ಜ್ಞಾನದ ಪ್ರಕಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಅವರಿಗೆ ಹಣದ ಅವ್ಯವಹಾರ ನಡೆದಿದೆ ಎಂಬ ಮಾಹಿತಿ ಸಿಕ್ಕರೆ ನಂತರ ಜಾರಿ ನಿರ್ದೇಶನಾಲಯ ದಾಳಿ ಮಾಡಿ ವಿಚಾರಣೆ ನಡೆಸಬಹುದು. ಆದರೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಏಕಾಏಕಿ ದಾಳಿ ಮಾಡಿರುವುದು ಗೊಂದಲ ಮೂಡಿಸಿದೆ. ನನ್ನ ಮನೆ ಮೇಲೂ ಸಿಬಿಐ ದಾಳಿ ಮಾಡಿ ನಂತರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸರ್ಕಾರದಿಂದ ಅನುಮತಿ ಪಡೆದು, ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿತು. ಇದೆಲ್ಲದಕ್ಕೂ ಒಂದು ಪ್ರಕ್ರಿಯೆ ಇದೆ. ಜಮೀರ್ ಅವರು ಬಿಡುವಾದಾಗ, ನಾನು ಅವರ ಜತೆ ಮಾತಾಡಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.


ಸೋಮಶೇಖರ್ ಮಾತು ಕೇಳಿ ಸಂತೋಷವಾಯ್ತು
ನಮ್ಮ ಸೋಮಶೇಖರ್ ಅವರು, ನನ್ನ ನಿಯಂತ್ರಣದಲ್ಲಿ ಇ.ಡಿ. ಇದೆ ಎಂದು ಹೇಳಿರುವುದನ್ನು ಕೇಳಿ ಸಂತೋಷವಾಗುತ್ತಿದೆ. ಅವರಿಗೆ ಹೆಚ್ಚುವರಿ ಜವಾಬ್ದಾರಿ ಸಿಗುತ್ತಿದೆ. ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಡಿದರು.

Join Whatsapp
Exit mobile version