ಹೊಸದಿಲ್ಲಿ: ಕೊಲೆ ಪ್ರಕರಣದಲ್ಲಿ ಸಾವಿಗೀಡಾಗುವ ಮುನ್ನ ಸಂತ್ರಸ್ತ ನೀಡಿರುವ ಹೇಳಿಕೆಯಿಂದ ಆರೋಪಿಯ ಶಿಕ್ಷೆಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ತನ್ನ ಪುತ್ರ ಇಸ್ಲಾಮುದ್ದೀನ್ ಮತ್ತು ಇಬ್ಬರು ಸಹೋದರರಾದ ಇರ್ಷಾದ್ ಮತ್ತು ನೌಶಾದ್ ಹತ್ಯೆ ಪ್ರಕರಣದಲ್ಲಿ ಕಳೆದ ಎಂಟು ವರ್ಷಗಳಿಂದ ಜೈಲಿನಲ್ಲಿರುವ ಇರ್ಫಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಸಾಯುವಾಗ ವ್ಯಕ್ತಿ ನೀಡಿದ ಹೇಳಿಕೆಯನ್ನು ಆಧಾರವಾಗಿಟ್ಟು ಕೆಳ ನ್ಯಾಯಾಲಯವು ಇರ್ಫಾನ್‌ಗೆ ಶಿಕ್ಷೆ ವಿಧಿಸಿತ್ತು.
ವ್ಯಕ್ತಿಯೊಬ್ಬ ಶೇಕಡಾ 80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿರುವಾಗ ಈ ಹೇಳಿಕೆಗಳನ್ನು ನೀಡಿದ್ದನು ಎಂಬ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಅಲಹಾಬಾದ್ ಹೈಕೋರ್ಟ್ 2018 ರಲ್ಲಿ ವಿಧಿಸಿದ್ದ ತೀರ್ಪಿನಿಂದ ತೃಪ್ತಿ ಹೊಂದಿಲ್ಲ ಎಂದ ಸುಪ್ರೀಂಕೋರ್ಟ್ ಹೇಳಿದ್ದು ತಕ್ಷಣವೇ ಇರ್ಫಾನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.