Home ಟಾಪ್ ಸುದ್ದಿಗಳು ಉದ್ಯೋಗದ ಹಕ್ಕಿಗಾಗಿ ಆಗಸ್ಟ್ 14 ರಂದು ರಾಜ್ಯಾದ್ಯಂತ ಪ್ರತಿಭಟನಾ ಧರಣಿಗೆ ಡಿವೈಎಫ್ಐ ಕರೆ

ಉದ್ಯೋಗದ ಹಕ್ಕಿಗಾಗಿ ಆಗಸ್ಟ್ 14 ರಂದು ರಾಜ್ಯಾದ್ಯಂತ ಪ್ರತಿಭಟನಾ ಧರಣಿಗೆ ಡಿವೈಎಫ್ಐ ಕರೆ

ಬೆಂಗಳೂರು: “ಉದ್ಯೋಗ ಸೃಷ್ಟಿಸಿ, ಸ್ಥಳೀಯರಿಗೆ ಆದ್ಯತೆ ಒದಗಿಸಿ” ಎಂಬ ಘೋಷಣೆಯಡಿಯಲ್ಲಿ ಉದ್ಯೋಗ ಸೃಷ್ಟಿ, ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗಾಗಿ ಹೋರಾಟ ನಡೆಸಲು ನಿರ್ಧರಿಸಿದ್ದು, ಅದರ ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಆಗಸ್ಟ್ 14 ರಂದು ರಾಜ್ಯಾದ್ಯಂತ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ನಡೆಸಲು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆ ನಿರ್ಧರಿಸಿದೆ.


ಸರಕಾರಗಳು ರೂಪಿಸುತ್ತಿರುವ ನೀತಿಗಳು, ಆಡಳಿತದ ವೈಫಲ್ಯಗಳಿಂದಾಗಿ ನಿರುದ್ಯೋಗದ ದರ ಸ್ವತಂತ್ರ ಭಾರತದಲ್ಲಿ ಎಂದೂ ಕಂಡರಿಯದ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಇದರಿಂದ ತಮ್ಮ ಅರ್ಹತೆಗೆ ಯೋಗ್ಯವಾದ ಉದ್ಯೋಗ, ಬದುಕಿನ ಭದ್ರತೆಗೆ ಬೇಕಾದ ಆದಾಯ ಇಲ್ಲದೆ ಯುವಜನತೆ ಹತಾಶರಾಗುತ್ತಿದ್ದಾರೆ ಎಂದು ಡಿವೈಎಫ್ಐ ಸಂಘಟನೆ ಆರೋಪಿಸಿದೆ.


ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2,70,000 ಉದ್ಯೋಗಗಳು ಭರ್ತಿಯಾಗದೆ ಖಾಲಿ ಬಿದ್ದಿವೆ. ಖಾಸಗಿ ಉದ್ಯಮಗಳು ಕಾರ್ಮಿಕರನ್ನು ಬಳಸಿ ಬಿಸಾಕುವ ನೀತಿ ಅನುಸರಿಸುತ್ತಿವೆ. ಗುತ್ತಿಗೆ ಪದ್ದತಿಗಳು ಜೀತಪದ್ದತಿಯ ಹೊಸ ರೂಪದಂತೆ ಮಾರ್ಪಾಡಾಗಿದ್ದು ಜೀವನ ನಿರ್ವಹಣೆಗೆ ಬೇಕಾದ ವೇತನ, ಉದ್ಯೋಗ ಭದ್ರತೆ ಇಲ್ಲದೆ ಅಮಾನವೀಯ ದುಡಿಮೆಗೆ ಸಾಕ್ಷಿಯಾಗಿದೆ.


ಕಿರು ಉದ್ಯಮಗಳು ಸರಕಾರದ ನೀತಿಗಳಿಂದ ಮುಚ್ಚಲ್ಪಡುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸಂಪನ್ಮೂಲಗಳನ್ನು ಬಳಸಿ ಕೊಂಡು ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ, ಕೈಗಾರಿಕೆಗಳ ಸ್ಥಾಪನೆಯ ಕಣ್ಣೋಟ ಸರಕಾರಗಳಲ್ಲಿ ಇಲ್ಲವೇ ಇಲ್ಲ ಎಂಬಂತಾಗಿದೆ. ರಾಜ್ಯದ ಕೈಗಾರಿಕಾ ಕೇಂದ್ರಗಳಲ್ಲಿ ನೇಮಕಾತಿಯ ಸಂದರ್ಭ ಸ್ಥಳೀಯರನ್ನು ಪೂರ್ಣವಾಗಿ ಕಡೆಗಣಿಸಿ ಹೊರಗಿನವರಿಗೆ ಮಣಿಹಾಕಲಾಗುತ್ತಿದೆ ಎಂದು ಡಿವೈಎಫ್ಐ ಸಂಘಟನೆ ತಿಳಿಸಿದೆ.


ಇವೆಲ್ಲವುಗಳಿಂದ ಯುವಜನರು ಕಂಗಾಲಾಗುತ್ತಿದ್ದು, ತಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ, ಜೀವನ ಭದ್ರತೆಗೆ ಜೀವಮಾನ ಪೂರ್ತಿ ಕಾಯುವ, ಬೀದಿಗೆ ಬೀಳುವ ಸ್ಥಿತಿ ನಿರ್ಮಾಣಗೊಂಡಿದೆ. ಶಿಕ್ಷಣ ಸಂಸ್ಥೆಗಳಿಂದ ಪದವಿಗಳನ್ನು ಹಿಡಿದು ಹೊರ ಬರುವ ಪರಿಣಿತ ಯುವ ಜನರು ತಮ್ಮ ಪದವಿಗೆ ಯೋಗ್ಯವಾದ ಉದ್ಯೋಗ ಇಲ್ಲದೆ ಅಸಹಾಯಕಾರಿ ನರಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಉದ್ಯೋಗದ ಹಕ್ಕಿಗಾಗಿ ಹೋರಾಟ ರೂಪಿಸಲು ನಿರ್ಧರಿಸಿದೆ. ಅದರ ಭಾಗವಾಗಿ “ಉದ್ಯೋಗದ ಸೃಷ್ಟಿ ಹಾಗೂ ಸರೋಜಿನಿ ಮಹಿಷಿ ವರದಿಯ ಜಾರಿಗೆ ಒತ್ತಾಯಿಸಿ ಸ್ವಾತಂತ್ರ್ಯ ದಿನದ ಮುನ್ನಾ ದಿನದಂದು ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಧರಣಿ, ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದೆ.

Join Whatsapp
Exit mobile version