Home ಕರಾವಳಿ ಕೊರೋನ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ದುಬಾರಿ ಬಿಲ್ ಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ...

ಕೊರೋನ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ದುಬಾರಿ ಬಿಲ್ ಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ DYFI ಯಿಂದ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳ ಶೇಕಡಾ ಐವತ್ತು ಬೆಡ್ ಗಳಲ್ಲಿ ಉಚಿತ ಚಿಕಿತ್ಸೆ ಆದೇಶವನ್ನು ತಕ್ಷಣ ಜಾರಿಗೆ ತರುವಂತೆ, ಆಯುಷ್ಮಾನ್ ಅಡಿ ಐಸಿಯು, ವೆಂಟಿಲೇಟರ್ ಬೆಡ್ ಗಳಲ್ಲಿ ಉಚಿತ ಚಿಕಿತ್ಸೆ ನೀಡಲು ನಿರಾಕರಿಸುವ, ಸರಕಾರ ನಿಗದಿ ಪಡಿಸಿದ ದರವನ್ನು ಮೀರಿ ಕೊರೋನ ರೋಗಿಗಳಿಗೆ ದುಬಾರಿ ಬಿಲ್ ವಿಧಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಕೆಪಿಎಮ್ಇ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಆಗ್ರಹಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಪ್ರತಿಬಟನೆಗೆ ಕರೆ ನೀಡಿತ್ತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೊರೋನ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಐವತ್ತು ಶೇಕಡಾ ಬೆಡ್ ಗಳನ್ನು ಸರಕಾರಿ ಕೋಟಾದಡಿ ಮೀಸಲಿಟ್ಟು ಉಚಿತ ಚಿಕಿತ್ಸೆ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ಆದೇಶ ಇಷ್ಟರವರಗೆ ಜಾರಿಗೆ ಬಂದಿಲ್ಲ. ಕೇವಲ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇದು ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರವೇ ನಿಗದಿ ಪಡಿಸಿದ ದುಬಾರಿ ದರ ಪಟ್ಟಿಯಡಿ ಚಿಕಿತ್ಸೆ ಪಡೆಯುವ ಅನಿವಾರ್ಯ ಸ್ಥಿತಿಗೆ ಜನಸಾಮಾನ್ಯ ಕೊರೋನ ಸೋಂಕಿತರನ್ನು ದೂಡಿದೆ‌. ಖಾಸಗಿ ಆಸ್ಪತ್ರೆಗಳ ಐಸಿಯು, ವೆಂಟಿಲೇಟರ್ ಬೆಡ್ ಗಳಲ್ಲಿ ಎಪಿಎಲ್, ಬಿಪಿಎಲ್ ತಾರತಮ್ಯವಿಲ್ಲದೆ ಆಯುಷ್ಮಾನ್ ಅಡಿ ಉಚಿತ ಚಿಕಿತ್ಸೆಯ ಆದೇಶ ಜಾರಿಯಾಗಿದ್ದರೂ ಕೆಲವು ಖಾಸಗಿ ಆಸ್ಪತ್ರೆಗಳು ಸುಳ್ಳು ಆಂಕಿ ಅಂಶಗಳನ್ನು ಬಳಸಿಕೊಂಡು ಆಯುಷ್ಮಾನ್ ಅಡಿ ಚಿಕಿತ್ಸೆ ನಿರಾಕರಿಸುತ್ತಿವೆ.

ಇದಲ್ಲದೆ ಖಾಸಗಿ ಕೋಟಾದ ರೋಗಿಗಳಿಗೆ, ಆಯುಷ್ಮಾನ್ ಯೋಜನೆಯ ರೋಗಿಗಳಿಗೆ ಸರಕಾರ ನಿಗದಿ ಪಡಿಸಿದ ದರ ಮಾತ್ರವಲ್ಲದೆ ನಿಯಮ ಬಾಹಿರವಾಗಿ ಲಕ್ಷಾಂತರ ರೂಪಾಯಿ ಅಕ್ರಮ ಬಿಲ್ ವಿಧಿಸುವ, ದುಬಾರಿ ಔಷಧಿಗಳನ್ನು ಖರೀದಿಸುವಂತೆ ಬಲವಂತ ಮಾಡುವ ಘಟನೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಕೊರೋನಾ ಸೋಂಕಿತ ರೋಗಿಗಳು ತೀರಾ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಈ ಕುರಿತು ಹಲವು ದೂರುಗಳನ್ನು ನೀಡಿದ್ದರೂ ಖಾಸಗಿ ಆಸ್ಪತ್ರೆಗಳ ಪ್ರಬಲ ಲಾಬಿ ಯಾವುದೇ ಹಿಂಜರಿಗೆ ಇಲ್ಲದೆ ತನ್ನ ಚಾಳಿಯನ್ನು ಮುಂದುವರಿಸುತ್ತಿದೆ.

ಈ ಕುರಿತು ಡಿವೈಎಫ್ಐ ಸತತವಾಗಿ ಧ್ವನಿ ಎತ್ತುತ್ತಾ ಬಂದಿದೆ. ಆದರೆ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಐವತ್ತು ಶೇಕಡಾ ಬೆಡ್ ಗಳನ್ನು ಸರಕಾರಿ ಕೋಟಾದ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಆದೇಶ ಜಾರಿಗೊಳಿಸುವುದು, ಐಸಿಯು, ವೆಂಟಿಲೇಟರ್ ಬೆಡ್ ಗಳ‌ನ್ನು ಆಯುಷ್ಮಾನ್ ಅಡಿ ನೀಡಲು ನಿರಾಕರಿಸುವ, ಸರಕಾರ ನಿಗದಿ ಪಡಿಸಿದ ದರ ಮಾತ್ರವಲ್ಲದೆ, ನಿಯಮ ಬಾಹಿರವಾಗಿ ದುಬಾರಿ ಬಿಲ್ ವಿಧಿಸುವ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿ ಮನೆ ಮನೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಡಿವೈಎಫ್ಐ ದ ಕ ಜಿಲ್ಲಾ ಸಮಿತಿಯ ಈ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸಾವಿರಕ್ಕೂ ಹೆಚ್ಚು ಜನ ತಮ್ಮ ಮನೆಯ ಮುಂದೆ ಭಿತ್ತಿ ಪತ್ರ ಹಿಡಿದು ನಿಂತು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version