Home ಟಾಪ್ ಸುದ್ದಿಗಳು ಬೆಳಗಾವಿಯ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ್ದು ನಾವೇ ಎಂದ ದುರ್ಗಾವಾಹಿನಿ ಕಾರ್ಯಕರ್ತೆ !

ಬೆಳಗಾವಿಯ ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ್ದು ನಾವೇ ಎಂದ ದುರ್ಗಾವಾಹಿನಿ ಕಾರ್ಯಕರ್ತೆ !

ಬೆಳಗಾವಿ: ಕೋಮು ಸೌಹಾರ್ದತೆ ಕೆಡಿಸುವ ಉದ್ದೇಶದಿಂದ ಬೆಳಗಾವಿಯ ಮಸೀದಿಯೊಂದರ ಮೇಲೆ ರಾತ್ರೋ ರಾತ್ರಿ ಕೇಸರಿ ಧ್ವಜ ಹಾಕಿದ ಘಟನೆ ಸಂಬಂಧ ಪೊಲೀಸರು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಈ ಮಧ್ಯೆ ನಾವೇ ಧ್ವಜ ಹಾರಿಸಿರುವುದು ಎಂದು ದುರ್ಗಾ ವಾಹಿನಿಯ ಕಾರ್ಯಕರ್ತೆಯೋರ್ವಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ.


ಆರ್ ಎಸ್ ಎಸ್ ನ ಅಂಗಸಂಸ್ಥೆಯಾದ ದುರ್ಗಾ ವಾಹಿನಿಯ ಪೂರ್ಣಿಮಾ ಬರಿಮಣಿ ಎಂಬಾಕೆ “ಇದನ್ನು ನಾವೇ ಮಾಡಿದ್ದು’ ಎಂದು ಫೇಸ್ ಬುಕ್ ನಲ್ಲಿ ಕಮೆಂಟ್ ಹಾಕಿದ್ದಾಳೆ. ಬೆಳಗಾವಿ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಕುರಿತು ಪತ್ರಿಕೆಯೊಂದು ಪ್ರಕಟಿಸಿದ್ದ ಸುದ್ದಿಯನ್ನು ಉಲ್ಲೇಖಿಸಿದ ಪೂರ್ಣಿಮಾ ಬರಿಮಣಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ “ ಇದನ್ನು ನಾವೇ ಮಾಡಿದ್ದು’ ಎಂದು ಬರೆದುಕೊಂಡಿದ್ದಾಳೆ. ಬಳಿಕ ಅದನ್ನು ಡಿಲೀಟ್ ಕೂಡ ಮಾಡಿದ್ದಾಳೆ.


ಇತ್ತೀಚೆಗೆ ಬೆಳಗಾವಿಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದ ಸತ್ತಿಗೇರಿ ಮಡ್ಡಿ ತೋಟದ ಮಸೀದಿ ಮೇಲೆ ಕೇಸರಿ ಬಣ್ಣದ ಧ್ವಜ ಕಟ್ಟಿ, ಶಾಂತಿ ಕದಡುವ ಪ್ರಯತ್ನ ಮಾಡಲಾಗಿತ್ತು. ಕಿಡಿಗೇಡಿಗಳು ರಾತ್ರೋ ರಾತ್ರಿ ಈ ಕೃತ್ಯ ಎಸಗಿದ್ದು, ಮುಸ್ಲಿಮರು ಬೆಳಗ್ಗೆ ಪ್ರಾರ್ಥನೆಗೆ ಮಸೀದಿಗೆ ಆಗಮಿಸಿದಾಗ ಕೇಸರಿ ಧ್ವಜ‌ ಕಟ್ಟಿರುವುದು ಗಮನಕ್ಕೆ ಬಂದಿತ್ತು.


ತಕ್ಷಣ ಸ್ಥಳೀಯ ಮುಸ್ಲಿಮ್ ಮುಖಂಡರು ಸೇರಿ ಮಸೀದಿ ಮೇಲೆ ಕಟ್ಟಲಾಗಿದ್ದ ಧ್ವಜ ತೆರವುಗೊಳಿಸಿದ್ದು, ಗ್ರಾಮದಲ್ಲಿ ಶಾಂತಿ ನೆಲೆಸಿದೆ. ಪೊಲೀಸರು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು, ಮಸೀದಿಗೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ಬೆಳಗಾವಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version