ದುಬೈ : ನೈಫ್’ನಲ್ಲಿ ಮಾಸ್ಕ್ ಹಾಕದ 518 ಜನರನ್ನು ಡ್ರೋನ್‌ಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸಿದ ದುಬೈ ಪೊಲೀಸರು !

Prasthutha|

► ಈ ವರ್ಷ ಇಲ್ಲಿಯವರೆಗೆ ದುಬೈನಲ್ಲಿ ಡ್ರೋನ್‌ಗಳ ಮೂಲಕ 4,400 ಅಪರಾಧಗಳನ್ನು ದಾಖಲು

ದುಬೈ: ಸುಧಾರಿತ ಡ್ರೋನ್‌ಗಳ ಮೂಲಕ ಗುರುತಿಸಿದ ನಂತರ ನೈಫ್ ಪ್ರದೇಶದಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ದುಬೈ ಪೊಲೀಸರು 518 ಜನರಿಗೆ ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈಫ್ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ತಾರಿಕ್ ತಹ್ಲಾಕ್ ಮಾತನಾಡಿ, ಈ ಪ್ರದೇಶದಲ್ಲಿ ವಿವಿಧ ರೀತಿಯ ಕಾನೂನು ಕ್ರಮಗಳ ಉಲ್ಲಂಘನೆಗಳನ್ನು ಪತ್ತೆ ಹಚ್ಚಲು ಡ್ರೋನ್‌ಗಳನ್ನು ಬಳಸುವ ಯೋಜನೆಯ ಮೊದಲ ಪ್ರಯತ್ನವಾಗಿದೆ ಇದು ಎಂದು ಹೇಳಿದರು.

- Advertisement -

“ಈ ಡ್ರೋನ್‌ಗಳು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಹೊಂದಿವೆ ಮತ್ತು ಕಿರಿದಾದ ಬೀದಿಗಳಲ್ಲಿ ಮತ್ತು ಕಾಲುದಾರಿಗಳಲ್ಲೂ ಕೂಡಾ ಉತ್ತಮ ವಿಡಿಯೋವನ್ನು ದಾಖಲಿಸಬಹುದು. ವರ್ಷದ ಮೊದಲ ತ್ರೈಮಾಸಿಕದಲ್ಲಿ, ಡ್ರೋನ್‌ಗಳು ಮಾಸ್ಕ್ ಗಳನ್ನು ಧರಿಸದ 518 ಜನರನ್ನು ಪತ್ತೆಹಚ್ಚಿದೆ, ಎಂದು ಪೊಲೀಸ್ ಅಧಿಕಾರಿ ತಹ್ಲಕ್ ಹೇಳಿದರು.

COVID-19 ಅನ್ನು ನಿಗ್ರಹಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದ ಜನರನ್ನು ಹಿಡಿಯುವುದರ ಜೊತೆಗೆ, ಅಪರಾಧಗಳನ್ನು ಪತ್ತೆಹಚ್ಚಲು ಸಹ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಮಾಸ್ಕ್ ಗಳನ್ನು ಧರಿಸಲು ವಿಫಲವಾದದ್ದು ಸೇರಿದಂತೆ ಒಟ್ಟು 4,400 ಉಲ್ಲಂಘನೆಗಳನ್ನು ಈ ವರ್ಷ ಡ್ರೋನ್‌ಗಳು ದಾಖಲಿಸಿವೆ. ಟ್ರಾಫಿಕ್ ನಿಯಮಗಳ ಉಲ್ಲಂಘನೆಗಾಗಿಯೂ ಡ್ರೋನ್‌ಗಳನ್ನು ಬಳಸಲಾಗತ್ತಿದ್ದು, ಇಂತಹ ಹಲವಾರು ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲು ಡ್ರೋನ್‌ಗಳು ದುಬೈ ಪೊಲೀಸರಿಗೆ ಸಹಾಯ ಮಾಡಿವೆ.

“ತೀವ್ರ ಅಧ್ಯಯನದ ನಂತರ ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ನಾವು ನೈಫ್‌ನಲ್ಲಿ ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಹೊಂದಿರುವ ಎರಡು ಡ್ರೋನ್‌ಗಳನ್ನು ಬಳಸಿದ್ದೇವೆ. ಡ್ರೋನ್‌ಗಳು ಮುಖಗಳು,  ಕಾರುಗಳ ಪ್ಲೇಟ್ ನಂಬರನ್ನು ಗುರುತಿಸಬಹುದು ಮತ್ತು ಜನರಿಗೆ ಅರಿವಾಗದಂತೆ ಅವರ ಹತ್ತಿರದ ಫೋಟೋಗಳನ್ನು ಸಹ ತೆಗೆದುಕೊಳ್ಳಬಹುದು, ಎಂದು ಬ್ರಿಗೇಡಿಯರ್ ತಹ್ಲಕ್ ತಿಳಿಸಿದರು. ಇದಲ್ಲದೆ, ಬೀದಿಗಳಲ್ಲಿ ಅಕ್ರಮ ವಸ್ತುಗಳನ್ನು ಮಾರಾಟ ಮಾಡುವ ಜನರನ್ನು ಡ್ರೋನ್‌ಗಳು ಪತ್ತೆ ಹಚ್ಚಿದ್ದು, ಅವರನ್ನು ಸ್ಥಳದಲ್ಲೇ ಬಂಧಿಸಲಾಗಿದೆ.

- Advertisement -