ದುಬೈ: ವ್ಯಕ್ತಿಯೊಬ್ಬರಿಂದ ಕಳೆದು ಹೋಗಿದ್ದ 4ಸಾವಿರ ದಿರ್ಹಮ್ ಹಣವನ್ನು ಹಿಂದಿರುಗಿಸಿ ಐದರ ಹರೆಯದ ಬಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಬಾಲಕನ ಈ ಪ್ರಾಮಾಣಿಕತೆಯನ್ನು ಅಲ್ ಖುಸೈಸ್ ಪೊಲೀಸ್ ಅಧಿಕಾರಿಗಳು ಗುರುತಿಸಿ ಗೌರವಿಸಿದ್ದಾರೆ.
ಫಿಲಿಪ್ಪೀನ್ಸ್ ಮೂಲದ ದಂಪತಿಯ ಪುತ್ರ, ಐದರ ಹರೆಯದ ಬಾಲಕ ನಿಜೆಲ್ ನೆರ್ಸ್ ಅಲ್ ಖುಸೈಸ್ ಠಾಣಾ ವ್ಯಾಪ್ತಿಯಲ್ಲಿ ಬಿದ್ದು ಸಿಕ್ಕಿದ್ದ ಹಣವನ್ನು ಠಾಣೆಗೆ ತಲುಪಿಸಿದ್ದಾನೆ. ಬಾಲಕನ ಈ ಪ್ರಾಮಾಣಿಕತೆ ಕಂಡು ಹರ್ಷ ವ್ಯಕ್ತಪಡಿಸಿದ ಪೊಲೀಸ್ ಅಧಿಕಾರಿಗಳು, ನಿಜೆಲ್ ನೆರ್ಸ್ ಗೆ ಆತನ ಪೋಷಕರ ಸಮ್ಮುಖದಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಸ್ವತಃ ಅಲ್ ಖುಸೈಸ್ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಅಬ್ದುಲ್ ಹಲೀಂ ಮೊಹಮ್ಮದ್ ಅಲ್ ಹಾಶ್ಮಿ ಅವರೇ ಬಾಲಕನನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಇಂತಹ ಮೆಚ್ಚುಗೆಗಳು ಮಕ್ಕಳಲ್ಲಿ ಎಳೆಯ ಪ್ರಾಯದಲ್ಲೇ ಪ್ರಾಮಾಣಿಕತೆ ಬೆಳೆಯಲು ಅವಕಾಶ ಮಾಡಿಕೊಡುತ್ತದೆ” ಎಂದು ನಿಜೆಲ್ ನೆರ್ಸ್ ತಂದೆ ಪ್ರತಿಕ್ರಿಯಿಸಿದ್ದಾರೆ.