Home ಟಾಪ್ ಸುದ್ದಿಗಳು ಮದ್ಯ ಮುಕ್ತ ಗ್ರಾಮದಲ್ಲಿ ಕುಡುಕರ ಹಾವಳಿ!: ಸರ್ಕಾರಿ ಶಾಲೆ ಆವರಣದಲ್ಲೇ ಬಿಯರ್ ಬಾಟಲಿಗಳ ರಾಶಿ

ಮದ್ಯ ಮುಕ್ತ ಗ್ರಾಮದಲ್ಲಿ ಕುಡುಕರ ಹಾವಳಿ!: ಸರ್ಕಾರಿ ಶಾಲೆ ಆವರಣದಲ್ಲೇ ಬಿಯರ್ ಬಾಟಲಿಗಳ ರಾಶಿ

►ಮೂರು ವರ್ಷಗಳ ಹಿಂದೆ ಪೊಲೀಸರಿಂದ ಘೋಷಣೆಯಾದ ಮದ್ಯ ಮುಕ್ತ ಗ್ರಾಮ ಹೆಸರಿಗಷ್ಟೇ ಸೀಮಿತ

ಕೊಪ್ಪಳ: ‘ಮದ್ಯ ಮುಕ್ತ ಗ್ರಾಮ’ ಎಂದೇ ಖ್ಯಾತಿ ಪಡೆದ ಹನುಮಸಾಗರ ಸಮೀಪದ ಯರಗೇರಾದ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಸರ್ಕಾರಿ ಹಿಪ್ರಾ ಶಾಲೆಯ ಆವರಣ ಕುಡುಕರು ಹಾಗೂ ಜೂಜುಕೋರರ ಅಡ್ಡೆಯಾಗಿದ್ದು, ದಿನ ಬೆಳಗಾದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಯ ಆವರಣ ಸ್ವಚ್ಛಗೊಳಿಸುವುದು ನಿತ್ಯ ಕಾಯಕವಾಗಿದೆ.

ಶಾಲೆಯ ರಜಾ ದಿನ ಹಾಗೂ ಬಿಡುವಿನ ವೇಳೆಯಲ್ಲಿ ಪುಂಡ-ಪೋಕರಿಗಳು ಬಿಡಾರ ಹೂಡಿ, ಕುಡಿದು ಇಸ್ಪೀಟ್ ಆಟವಾಡಿ, ಎಲ್ಲಿ ಬೇಕೆಂದರಲ್ಲಿ ಉಗುಳುವುದು, ಪ್ಲಾಸ್ಟಿಕ್, ಮದ್ಯದ ಬಾಟಲಿಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ನಿಯಂತ್ರಣಕ್ಕೆ ಶಾಲೆ ಗೇಟ್‌ಗೆ ಬೀಗ ಹಾಕಿದರೆ, ಅದನ್ನು ಮುರಿದು ಒಳ ಹೋಗುತ್ತಿದ್ದಾರೆ. ಗ್ರಾಮದ ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕಾದ ಗ್ರಾಮಸ್ಥರು ಹೀಗೆ ಮಾಡುತ್ತಿದ್ದು, ಕಿಡಿಗೇಡಿಗಳ ಕೃತ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂ ವಿಶೇಷವಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳೂ ಇದರಲ್ಲಿ ಭಾಗಿಯಾಗಿರುವುದು ತುಂಬಾ ಬೇಸರದ ಸಂಗತಿ

ಮೂರು ವರ್ಷಗಳ ಹಿಂದೆ ಯರಗೇರಾ ಗ್ರಾಮವನ್ನು ಪೊಲೀಸರು ಮದ್ಯ ಮತ್ತು ಜೂಜಾಟ ಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ದಾರೆ. ಮದ್ಯಮುಕ್ತ ಗ್ರಾಮ ಹೆಸರಿಗೆ ಮಾತ್ರ ಸೀಮಿತ . ಆದರೆ, ಶಾಲಾ ಆವರಣದಲ್ಲಿ ನಿತ್ಯ ಬೀಳುತ್ತಿರುವ ಮದ್ಯದ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್, ಹಾಳಿ ಹಾಗೂ ಇಸ್ಟೀಟ್ ಎಲೆಗಳನ್ನು ನೋಡಿದರೆ ಮದ್ಯಮುಕ್ತ ಗ್ರಾಮ ಘೋಷಣೆ ಕೇವಲ ನಾಮಫಲಕಕ್ಕೆ ಸೀಮಿತವಾಗಿದೆ ಎಂಬುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕುಷ್ಟಗಿ ಬಿಇಒ, ಸುರೇಂದ್ರ ಕಾಂಬಳೆ, ಯರಗೇರಾದಲ್ಲಿ ಸರ್ಕಾರಿ ಶಾಲೆಯ ವಾತಾವರಣ ಹಾಳು ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಲು ಎಸ್ಡಿಎಂಸಿ ಸಭೆ ಕರೆಯಲಾಗುವುದು. ಮದ್ಯ ಸೇವನೆ ಹಾಗೂ ಜೂಜಾಟದಲ್ಲಿ ತೊಡಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

Join Whatsapp
Exit mobile version