Home ಟಾಪ್ ಸುದ್ದಿಗಳು ನಾರಾಯಣ ಗುರುಗಳ ಪಠ್ಯ ಕೈಬಿಡುವುದು ಜಿಲ್ಲೆಯ ಬಹುಸಂಖ್ಯಾತರಿಗೆ ಮಾಡುವ ಅವಮಾನ: ರಮಾನಾಥ ರೈ

ನಾರಾಯಣ ಗುರುಗಳ ಪಠ್ಯ ಕೈಬಿಡುವುದು ಜಿಲ್ಲೆಯ ಬಹುಸಂಖ್ಯಾತರಿಗೆ ಮಾಡುವ ಅವಮಾನ: ರಮಾನಾಥ ರೈ

ಮಂಗಳೂರು: ಸಮಾಜ ಸುಧಾರಕ, ಸಂತ ನಾರಾಯಣ ಗುರುಗಳ ಹೆಸರನ್ನು ಪಠ್ಯ ಪುಸ್ತಕದಲ್ಲಿ ಕೈಬಿಟ್ಟದ್ದು ಬರೇ ಹಿಂದುಳಿದವರಿಗೆ ಮಾತ್ರ ಅವಮಾನ ಆದುದಲ್ಲ, ಜಗತ್ತಿನ ಸಮಸ್ತ ಮಾನವ ಕುಲಕೋಟಿಗೆ ನೋವಾಗಿದೆ ಎಂದು ಮಾಜಿ ಮಂತ್ರಿ ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಗುರುಗಳ, ದಾರ್ಶನಿಕರ ಪಠ್ಯ ಬಿಟ್ಟ ಬಗ್ಗೆ ಚಿಂತಕರು, ಲೇಖಕರು, ಪತ್ರಿಕೆಗಳವರು ಬರೆದಿದ್ದಾರೆ. ನಾವೂ ಖಂಡಿಸುತ್ತೇವೆ. ಬಿಜೆಪಿಯಲ್ಲಿ ಜಿಲ್ಲೆಯ ಇಬ್ಬರು ಬಿರುವ ಮಂತ್ರಿಗಳಿದ್ದಾರೆ. ಅವರಿಗೆ ಗುರುಗಳ ಬಗ್ಗೆ ಗೌರವ ಇದ್ದರೆ ರಾಜೀನಾಮೆ ನೀಡಬೇಕು ಎಂದು ರಮಾನಾಥ ರೈ ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾರಾಯಣ ಗುರುಗಳ ಸಮುದಾಯದವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಗುರುಗಳ ವಿಷಯದಲ್ಲಿ ಬಿಜೆಪಿ ಕೀಳು ರಾಜಕೀಯ ಮಾಡಬಾರದು. ಗೋಡ್ಸೆ, ಹೆಡಗೆವಾರ್ ಅಭಿಮಾನ ಬಿಜೆಪಿಯವರಿಗೆ ಇದ್ದರೆ ಪಕ್ಷದ ಕಚೇರಿಗಳಲ್ಲಿ ಮಾಡಿಕೊಳ್ಳಲಿ, ಮಕ್ಕಳು ಕಲಿಯುವ ಪಾಠ ಪುಸ್ತಕದಲ್ಲಿ ಅಲ್ಲ ಎಂದು ರೈಗಳು ತಿಳಿಸಿದರು.
ನಾರಾಯಣ ಗುರುಗಳು ಕಾಂಗ್ರೆಸ್ ನ ಸಮಾಜ ಸುಧಾರಣೆ, ಸಹಬಾಳ್ವೆ, ಜಾತ್ಯತೀತ ಸಿದ್ಧಾಂತಕ್ಕೆ ಹತ್ತಿರವಾದವರು. ಜಿಲ್ಲೆಯ ಜನರ ಭಾವನೆಯು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ನೀತಿಯನ್ನು ಖಂಡಿಸುತ್ತದೆ. ಈ ಲೋಪವು ಉದ್ದೇಶಪೂರ್ವಕ ಎಂದು ಈಗಾಗಲೇ ಚಿಂತಕರು, ಪತ್ರಿಕೆಗಳು ಹೇಳಿವೆ. ಬಿಜೆಪಿ ಆಡಳಿತವು ಸಮಗ್ರ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ವಿರೋಧಿ ನಿಲುವು. ಸಾಮಾಜಿಕ ನ್ಯಾಯ ನೀಡದಿರುವ ಬಿಜೆಪಿಯ ನೀತಿ ಇದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಶಶಿಧರ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp
Exit mobile version