ಬೆಳ್ತಂಗಡಿ: ಏಕಾಏಕಿ ನದಿಯಲ್ಲಿ ಹೆಚ್ಚಾದ ನೀರಿನ ಸೆಳೆತಕ್ಕೆ ಸಿಲುಕಿ ಪಿಕಪ್ ವಾಹನವೊಂದು ಮುಳುಗಿದ ಘಟನೆ, ಚಾರ್ಮಾಡಿ ಸಮೀಪದ ಚಿಬಿದ್ರೆಯ ಉರ್ಪೆಲ್ ಗುಡ್ಡೆ ಎಂಬಲ್ಲಿ ನಡೆದಿದೆ.
ಅಳದಂಗಡಿಯಿಂದ ಬಂದ ಪಿಕಪ್ ವಾಹನ, ಮನೆಯೊಂದಕ್ಕೆ ಸೆಂಟ್ರಿಂಗ್ ಸಾಮಗ್ರಿ ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಮೃತ್ಯುಂಜಯ ನದಿ ದಾಟುತ್ತಿದ್ದ ವೇಳೆ ವಾಹನ ಮಧ್ಯಭಾಗಕ್ಕೆ ಬರುತ್ತಿದ್ದಂತೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ವಾಹನ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯದ ಸೂಚನೆ ಅರಿತ ಚಾಲಕ ಹಾಗೂ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ಗಾಡಿಯಿಂದ ಇಳಿದು ನದಿಯಿಂದ ಹೊರ ಬಂದಿದ್ದಾರೆ.
ಬಳಿಕ ಎಸ್ಕೆಎಸ್ಎಸ್ಎಫ್ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪ್ ವಾಹನವನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ. ಸ್ಥಳೀಯವಾಗಿ ಮಳೆ ಇಲ್ಲದಿದ್ದರೂ ನೀರಿನ ಮಟ್ಟ ಅಷ್ಟೊಂದು ಏರಿಕೆಯಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.