ಉಳ್ಳಾಲದಲ್ಲಿ “ಕನಸಿನ ಕರ್ನಾಟಕ – ಸ್ವಚ್ಛ ಕರ್ನಾಟಕ” ಅಭಿಯಾನಕ್ಕೆ ಚಾಲನೆ: ಹಲವೆಡೆ ಸ್ವಚ್ಛತಾ ಕಾರ್ಯ

Prasthutha|

ಉಳ್ಳಾಲ: ಕನಸಿನ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ವಚ್ಛತೆಯ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಪ್ಯುಲರ್ ಫ್ರಂಟ್ ಬ್ಲಡ್ ಫಾರಂ ವತಿಯಿಂದ “ಕನಸಿನ ಕರ್ನಾಟಕ – ಸ್ವಚ್ಛ ಕರ್ನಾಟಕ”ಎಂಬ ಘೋಷಣೆಯಡಿಯಲ್ಲಿ ಜನವರಿ 21-31ರ ವರೆಗೆ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಉಳ್ಳಾಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಉಳ್ಳಾಲ ನಗರ ಸಭೆ ಆಯುಕ್ತ ರಾಯಪ್ಪ ಚಾಲನೆ ನೀಡಿದರು.

- Advertisement -

ಬಳಿಕ ಮಾತನಾಡಿದ ಅವರು, ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಯನ್ನು ಬಿಡಬೇಕು. ಒಣ, ಹಸಿ ಮತ್ತು ಅಪಾಯಕಾರಿ ಕಸ ಎಂಬ ಮೂರು ವಿಭಾಗಗಳನ್ನು ಮಾಡಿದ್ದು, ಪ್ರತಿಯೊಬ್ಬರೂ ಮನೆಯಿಂದಲೇ ಕಸವನ್ನು ಪ್ರತ್ಯೇಕಿಸಿ ಕೊಡಲು ಪ್ರಯತ್ನಿಸಬೇಕು ಎಂದರು.
ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ 25 ಸಾವಿರ ಮನೆಗಳಿದ್ದು, 65 ಸಾವಿರ ನಿವಾಸಿಗಳಿದ್ದಾರೆ. ಪ್ರತಿ ದಿನ 11ರಿಂದ 12 ಟನ್ ಹಸಿ ಕಸ ಸಂಗ್ರಹವಾಗುತ್ತಿದೆ. ನಾಲ್ಕು ಕಡೆಗಳಲ್ಲಿ ಕಸವನ್ನು ಕಾಂಪೋಸ್ಟ್ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಉಳ್ಳಾಲ ನಗರ ಮಾದರಿ ನಗರವಾಗಿ ರೂಪಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಅಭಿಯಾನದ ಅಂಗವಾಗಿ ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಬೀಚ್, ಉದ್ಯಾನವನ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಸ್ಮಾಯೀಲ್ ಉಳ್ಳಾಲ, ಬ್ಲಡ್ ಡೋನರ್ಸ್ ಫೋರಮ್ ಅಧ್ಯಕ್ಷ ತನ್ವೀರ್ ಉಳ್ಳಾಲ್, ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ ಮತ್ತಿತರರು ಉಪಸ್ಥಿತರಿದ್ದರು.

Join Whatsapp