Home ಟಾಪ್ ಸುದ್ದಿಗಳು ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ

ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಇಂದು ಪ್ರಮಾಣ ವಚನ

ಪ್ರತಿ ಬಾರಿ ಜು. 25ರಂದು ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸುವುದು ಯಾಕೆ ಗೊತ್ತಾ?


ನವದೆಹಲಿ: ಭಾರತದ ’15ನೇ ರಾಷ್ಟ್ರಪತಿ’ಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಇಂದು (ಸೋಮವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.


ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಬೆಳಗ್ಗೆ 10-15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.


ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯು ಪ್ರತಿಬಾರಿಯಂತೆ ಈ ಬಾರಿಯೂ ಜುಲೈ 25ರಂದೇ ನಡೆಯುತ್ತಿದೆ. ನಿರ್ದಿಷ್ಟವಾಗಿ ಇದೇ ದಿನಾಂಕದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಬೇಕು ಎನ್ನುವ ಲಿಖಿತ ನಿಯಮ ಭಾರತದಲ್ಲಿ ಇಲ್ಲ. ಆದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಝಾಕಿರ್ ಹುಸೇನ್ ಮತ್ತು ಫಕ್ರುದ್ದೀನ್ ಆಲಿ ಅಹ್ಮದ್ ಅಧಿಕಾರದಲ್ಲಿದ್ದಾಗಲೇ ಮೃತಪಟ್ಟಿದ್ದರು. ಹೀಗಾಗಿ ರಾಷ್ಟ್ರಪತಿ ಸ್ಥಾನಕ್ಕೆ ಅವಧಿಪೂರ್ವ ಚುನಾವಣೆಗಳು ನಡೆಯಬೇಕಾಯಿತು.


ಭಾರತದ 6ನೇ ರಾಷ್ಟ್ರಪತಿಯಾಗಿ ಜುಲೈ 25, 1977ರಂದು ನೀಲಂ ಸಂಜೀವ ರೆಡ್ಡಿ ಅಧಿಕಾರ ಸ್ವೀಕರಿಸಿದರು. ನಂತರ ಈ ಪದವಿಗೆ ಬಂದ ಗಿಯಾನಿ ಜೈಲ್ ಸಿಂಗ್, ಆರ್.ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ, ಕೆ.ಆರ್.ನಾರಾಯಣನ್, ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ಪ್ರಣಬ್ ಮುಖರ್ಜಿ ಮತ್ತು ರಾಮನಾಥ್ ಕೋವಿಂದ್ ಅವರು ಅದೇ ದಿನಾಂಕದಂದು ಅಂದರೆ ಜುಲೈ 25ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

Join Whatsapp
Exit mobile version