Home ಟಾಪ್ ಸುದ್ದಿಗಳು 14ನೇ ಬಜೆಟ್ ಮಂಡಿಸಲು ಸಿದ್ಧವಾಗಿರುವ ಆರ್ಥಿಕ ಜ್ಞಾನಿಗಳಿಗೆ ಗ್ಯಾರಂಟಿ ಜಾರಿ ಹೇಗೆಂಬುದು ಗೊತ್ತಿಲ್ಲವೆ: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

14ನೇ ಬಜೆಟ್ ಮಂಡಿಸಲು ಸಿದ್ಧವಾಗಿರುವ ಆರ್ಥಿಕ ಜ್ಞಾನಿಗಳಿಗೆ ಗ್ಯಾರಂಟಿ ಜಾರಿ ಹೇಗೆಂಬುದು ಗೊತ್ತಿಲ್ಲವೆ: ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಉಚಿತ, ಖಚಿತ ಎಂದು ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು, ಇವತ್ತು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್. ಡಿ.ದೇವೇಗೌಡರ ಸಮಕ್ಷಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯುತ್ ಬಳಕೆ ಬಗ್ಗೆ ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಜನರನ್ನು ಎತ್ತಿಕಟ್ಟುತ್ತಿವೆ ಅಂತ ಅವರು ಹೇಳಿದ್ದಾರೆ. ಅಂಥ ಹೇಳಿಕೆ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ ಎಂದು ಅವರು ಕಿಡಿಕಾರಿದರು.

ಇದಕ್ಕೆಲ್ಲಾ ವೇದಿಕೆ ಸಿದ್ದ ಮಾಡಿಕೊಟ್ಟಿದ್ದೇ ನೀವು. ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಿ. ಸುಳ್ಳು ಹೇಳಿ ಮತ ಪಡೆದಿರಿ. ಈಗ ನಿಮಗೆ ಅದರ ಸಾಧಕ ಭಾದಕ ಅರ್ಥ ಆಗ್ತಾ ಇದೆ. ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ? ಪರಿಜ್ಞಾನ ಇರಲಿಲ್ಲವಾ? ಈಗ ಷರತ್ತು ಎನ್ನುತ್ತಿದ್ದಾರೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಅವರು ಪ್ರಶ್ನಿಸಿದರು.

ಈಗಿನ ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು. ಈಗಾಗಲೇ 13 ಬಜೆಟ್ ಗಳನ್ನು ಮಂಡಿಸಿದ್ದಾರೆ. ಇನ್ನೇನು 14ನೇ ಬಜೆಟ್ ಅನ್ನೂ ಮಂಡಿಸಲಿದ್ದಾರೆ. ರಾಜ್ಯದ ಹಣಕಾಸು ಬಗ್ಗೆ, ಆರ್ಥಿಕತೆ ಬಗ್ಗೆ ಅವರಿಂತ ಬಲ್ಲ ಜ್ಞಾನಿಗಳು ಯಾರಿದ್ದಾರೆ? ಮುಂದೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು. ಅದು ಬಿಟ್ಟು ಜನರನ್ನು ಪ್ರತಿಪಕ್ಷಗಳು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.

ಈಗ ಬಾಡಿಗೆದಾರರ ಕಥೆ ಏನು? :

ಎಲ್ಲರಿಗೂ ಉಚಿತ, ನಿಶ್ಚಿತ, ಖಚಿತ ಅಂದವರು ನೀವೇ ಅಲ್ಲವೇ? ನಾನು ಪ್ರತಿಪಕ್ಷದಲ್ಲಿ ಕೂತಿರುವುದು ಸರಕಾರ ಮಾಡುವ ಪ್ರತಿ ಜನವಿರೋಧಿ ಕೆಲಸಗಳಿಗೆ ಕೈ ಎತ್ತುವುದಕ್ಕಲ್ಲ. ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ಸಮರ ಸಾರುವುದಕ್ಕೆ. ನಮ್ಮದು ನುಡಿದಂತೆ ನಡೆಯುವ ಸರಕಾರ ಎಂದರು, ನುಡಿದಂತೆ ಎಲ್ಲಿ ನಡೆಯುತ್ತಿದೆ? ಈಗ ಉಚಿತ ವಿದ್ಯುತ್ ಅನ್ನು ಬಾಡಿಗೆದಾರರಿಗೆ  ಕೊಡುವುದಿಲ್ಲ ಎನ್ನುತ್ತಿದೆ. ಹಾಗಾದರೆ ಅವರ ಪಾಡೇನು? ಎಂದರು ಮಾಜಿ ಮುಖ್ಯಮಂತ್ರಿಗಳು.

ಬೆಂಗಳೂರು ನಗರಾಭಿವೃದ್ಧಿ ಸಚಿವರು ಸ್ನೇಹಕ್ಕೂ ಸಿದ್ದ, ಯುದ್ದಕ್ಕೂ ಸಿದ್ದ ಅಂದಿದ್ದಾರೆ. ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕ್ಕಲ್ಲ. ಜನರಿಗೆ ಕಷ್ಟ ಬಂದರೆ ಯುದ್ಧ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ನಾವು ಕೈಕಟ್ಟ ಕೂರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಸೋಮವಾರ ಧರಣಿ ಮಾಡಿದ್ದಾರೆ. ಇವರು ಯಾವ ಕಾರಣಕ್ಕಾಗಿ ಧರಣಿ ಪ್ರತಿಭಟನೆ ಮಾಡಿದ್ದಾರೆ ಎನ್ನುವುದೇ ಸೋಜಿಗ. ಬಿಜೆಪಿ ಸರಕಾರದ ಕಾಲದಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಅಷ್ಟು ಎಂದಿದ್ದು.  ಇವತ್ತು ನೋಡಿದರೆ ಪ್ರತಿಭಟನೆ ಅಂತ ಕಣ್ಣೊರೆಸುವ ನಾಟಕ ನಾಟಕ ಆಡುತ್ತಿದ್ದಾರೆ. ಜನರು ಎರಡೂ ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕಿದ ಪರಿಣಾಮ ಏನು ಎನ್ನುವುದು ಜನರಿಗೆ ಚೆನ್ನಾಗಿ ಅರ್ಥ ಆಗಿದೆ. ಎಲ್ಲದಕ್ಕೂ ದೆಹಲಿಗೆ ಅರ್ಜಿ ಹಿಡಿದುಕೊಂಡು ದೆಹಲಿಗೆ ಹೋಗಬೇಕಿದೆ ಎಂದು ಲೇವಡಿ ಮಾಡಿದ ಮಾಜಿ ಮುಖ್ಯಮಂತ್ರಿಗಳು, ಐದು ಗ್ಯಾರಂಟಿ ಗಳ ಬಗ್ಗೆ ನಾನು ಈಗಲೇ ಚರ್ಚೆ ಮಾಡಲ್ಲ. ನಾನು ಕಾಯುತ್ತೇನೆ. ಕಾಂಗ್ರೆಸ್ ನವರು ಗ್ಯಾರಂಟಿ ಕೊಟ್ಟಿದ್ದು ತಪ್ಪಲ್ಲ, ಆದರೆ ಈಡೇರಿಸಬೇಕು. ಅದು ಆಡಳಿತ ಪಕ್ಷದ ಹೊಣೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಈ ಸರಕಾರಕ್ಕೆ ನಮ್ಮ ಬೆಂಬಲ, ವಿರೋಧ ವಿಷಯಾಧಾರಿತ ಆಗಿರುತ್ತದೆ. ನೀರಾವರಿ ಯೋಜನೆಗಳನ್ನು ಎಲ್ಲವನ್ನೂ ಈಡೇರಿಸಬೇಕು. ನೀರಾವರಿಗೆ ಸಂಬಂಧಿಸಿದಂತೆ ಈ ಸರಕಾರ ಮುಂದಿನ ಐದು ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡುತ್ತೆದೆಯೋ ನೋಡೋಣ. ಮೇಕೆದಾಟು, ಮಹಾದಾಯಿ ಯೋಜನೆಗಳನ್ನು ಸಂಪೂರ್ಣ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಬಿಟ್ಟು ಬರೀ ಹೇಳಿಕೆಗೆ ಸೀಮಿತವಾದರೆ ನಾವು ಮತ್ತೆ ಜನರನ್ನು ಜಾಗೃತ ಗೊಳಿಸುವ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಪಕ್ಷದ ಹಿರಿಯ ನಾಯಕ, ಶಾಸಕ ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿಎಂ ಫಾರೂಖ್, ಟಿ.ಎ.ಶರವಣ, ಇಂಚರ ನಾರಾಯಣಸ್ವಾಮಿ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಶಾಸಕರಾದ ಮೇಲೂರು ರವಿ, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ ಮೂರ್ತಿ, ಹಿರಿಯ ಮುಖಂಡರಾದ ಜವರಾಯ ಗೌಡ, ಸಿಎಂಆರ್ ಶ್ರೀನಾಥ್, ಮುನೇಗೌಡ, ಬಂಗಾರಪೇಟೆ ಮಲ್ಲೇಶ್ ಮುಂತಾದವರು ಹಾಜರಿದ್ದರು.

Join Whatsapp
Exit mobile version