Home ಟಾಪ್ ಸುದ್ದಿಗಳು ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ, ವಿಶೇಷ ಅಧಿವೇಶನ ಕರೆಯಿರಿ: ಡಿ.ಕೆ. ಶಿವಕುಮಾರ್

ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ, ವಿಶೇಷ ಅಧಿವೇಶನ ಕರೆಯಿರಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ವಿಚಾರದಲ್ಲಿ ಕೇವಲ ಸುಗ್ರೀವಾಜ್ಞೆ ಮೂಲಕ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ. ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆದು ಅಲ್ಲಿ ಚರ್ಚೆ ಮಾಡಿ ಈ ಮೀಸಲಾತಿಗೆ ಅನುಮೋದನೆ ಪಡೆದು, ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ಶ್ರೇಯ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಆಧಾರದ ಮೇಲೆ ಕೆಲಸ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷದ ಕೂಸು. ನಾವು ಈ ಮೀಸಲಾತಿ ನೀಡುವ ವಿಚಾರವಾಗಿ ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದ್ದೆವು. ಕಾಂಗ್ರೆಸ್ ಪಕ್ಷ ಕೂಡ ಈ ಸಮಿತಿ ವರದಿ ಜಾರಿಗೆ ಆಗ್ರಹಿಸಿತ್ತು. ಈ ಸಮುದಾಯದವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಇಚ್ಛೆ, ನಡೆ ಹಾಗೂ ನಂಬಿಕೆ ಆಗಿತ್ತು. ಅದಕ್ಕಾಗಿ ನಾವು ಸಮಿತಿ ರಚನೆ ಮಾಡಿ, ಹೋರಾಟ ಮಾಡಿ ಈಗ ಈ ಮೀಸಲಾತಿ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿಯವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಆದರೆ ಮಾಡಲಿಲ್ಲ. ಈಗ ಕಡೆ ಗಳಿಗೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಮಾಡಿದ್ದಾರೆ. ಅವರಿಗೆ ಪರಿಶಿಷ್ಟರ ಮೇಲೆ ನಂಬಿಕೆ ಇರಲಿಲ್ಲ. ಇದ್ದಿದ್ದರೆ ಇಷ್ಟು ದಿನ ಕಾಲಹರಣ ಮಾಡದೇ ಅಧಿಕಾರಕ್ಕೆ ಬಂದ ದಿನವೇ ಮಾಡುತ್ತಿದ್ದರು ಎಂದು ಆರೋಪಿಸಿದರು.

ಈಗಲೂ ಡಬಲ್ ಇಂಜಿನ್ ಸರ್ಕಾರ ಇದೆ. ಹೀಗಾಗಿ ಸುಗ್ರೀವಾಜ್ಞೆ ಬದಲು ರಾಜ್ಯದಲ್ಲಿ ವಿಶೇಷ ಅಧಿವೇಶನ ಕರೆದು ಅಲ್ಲಿ ಚರ್ಚೆ ಮಾಡಿ ಈ ಮೀಸಲಾತಿಗೆ ಅನುಮೋದನೆ ಪಡೆದು, ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ 9ನೇ ಶೆಡ್ಯೂಲ್ ನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಈ ಮೀಸಲಾತಿಯನ್ನು ದಾಖಲೆ ರೂಪದಲ್ಲಿ ತರಲಿ. ಕೇವಲ ಸುಗ್ರೀವಾಜ್ಞೆ ಮೂಲಕ ಮೂಗಿಗೆ ತುಪ್ಪ ಸವರುವ ಪ್ರಯತ್ನ ಬೇಡ ಎಂದು ಕಿವಿಮಾತು ಹೇಳಿದರು.

ಸ್ವಾಮೀಜಿಗಳು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದರಲ್ಲಿ ನಮ್ಮ ಆಕ್ಷೇಪ ಇಲ್ಲ. ನಾಗಮೋಹನ್ ದಾಸ್ ಸಮಿತಿ ರಚನೆ ಮಾಡಿದ ನಮಗೆ ಅಭಿನಂದನೆ ಸಲ್ಲಿಸದಿದ್ದರೂ ನಮಗೆ ಬೇಸರವಿಲ್ಲ. ಸಂಸತ್ತಿನಲ್ಲಿ ಈ ಪ್ರಸ್ತಾಪ ಸಲ್ಲಿಸಿ, ಅದಕ್ಕೆ ಸಾಂವಿಧಾನಿಕ ತಿದ್ದುಪಡಿ ತಂದ ಬಳಿಕ ಅವರು ಅಭಿನಂದನೆ ಸಲ್ಲಿಸಲಿ’ ಎಂದು ತಿಳಿಸಿದರು.

ಈ ಮೀಸಲಾತಿ ಸದ್ಯಕ್ಕೆ ಜಾರಿ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ ಈ ಬಗ್ಗೆ ಕಾನೂನು ಸಚಿವರನ್ನೇ ಕೇಳಿ, ಸರ್ಕಾರ ಉತ್ತರ ಕೊಡಲಿ ‘ ಎಂದರು.

ಒಕ್ಕಲಿಗರಿಗೆ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನಾನು ಭಾರತ ಯಾತ್ರೆ ಕೆಲಸ ಮುಗಿಸಿ ಈಗಷ್ಟೇ ಬಂದಿದ್ದೇನೆ ‘ ಎಂದರು.

ಭಾರತ ಜೋಡೋ ಯಾತ್ರೆಯಿಂದ ಶಿವಕುಮಾರ್ ಅವರಿಗೆ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಯಾವ ಲಾಭ ಆಗಿದೆ ಎಂಬ ಪ್ರಶ್ನೆಗೆ, ‘ ಈ ಯಾತ್ರೆಯಿಂದ ನನಗಿಂತ, ದೇಶಕ್ಕೆ, ರಾಜ್ಯಕ್ಕೆ, ನೊಂದ ಜನರಿಗೆ ಹಾಗೂ ಪಕ್ಷಕ್ಕೆ ಲಾಭ ಆಗಿದೆ. ಯುವಕರು, ರೈತರು, ಮಹಿಳೆಯರಿಗೆ ಧೈರ್ಯ ತುಂಬಿದೆ. ನಿನ್ನೆ ರಾಯಚೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಅದರಲ್ಲೂ ಹೆಚ್ಚಾಗಿ ಯುವಕರು ಬಂದಿದ್ದರು. ಪಕ್ಷದ ಅಧ್ಯಕ್ಷನಾಗಿ ನನ್ನ ಕಾಲದಲ್ಲಿ ಇಂತಹ ಯಾತ್ರೆ ನಡೆದಿದೆ ಎಂಬುದು ಹೆಮ್ಮೆಯ ವಿಚಾರ. ಮತ್ತೆ ಮೇಕೆದಾಟು ಪಾದಯಾತ್ರೆ, ಸ್ವಾತಂತ್ರ್ಯ ನಡಿಗೆ ಹಾಗೂ ಭಾರತ ಐಕ್ಯತಾ ಯಾತ್ರೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಇದರಿಂದ ಪಕ್ಷ ಹಾಗೂ ಜನರಿಗೆ ಲಾಭ ಆಗಿದ್ದು, ಇದು ಸಮಾಧಾನದ ವಿಚಾರ ‘ ಎಂದರು.

ಮುಂದಿನ ಬಸ್ ಯಾತ್ರೆ ಬಗ್ಗೆ ಕೇಳಿದಾಗ, ‘ ಈ ವಿಚಾರವಾಗಿ ನಾಳೆ ಸಭೆ ಇತ್ತು. ನಾನು ಹೋಗಲು ಆಗುತ್ತಿಲ್ಲ. ಹೀಗಾಗಿ ನಾಡಿದ್ದು ಚರ್ಚೆ ಮಾಡುತ್ತೇವೆ. ಇದು ಕೇವಲ ನಾನೊಬ್ಬನೇ ತೀರ್ಮಾನಿಸುವ ವಿಚಾರವಲ್ಲ. ಎಲ್ಲ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುವಂತಹದ್ದು. ನಾವು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಮನೆ, ಮನೆಗೆ ತೆಗೆದುಕೊಂಡು ಹೋಗಬೇಕು. ಪಕ್ಷದ ಹಿರಿಯ ನಾಯಕರು ಭಾರತ ಐಕ್ಯತಾ ಯಾತ್ರೆ ಬಗ್ಗೆ ಚರ್ಚೆ ಮಾಡಿದ್ದು, ಯಾವ ವಿಚಾರದಲ್ಲಿ ಸುಧಾರಣೆ ಕಾಣಬೇಕು ಎಂದು ಚರ್ಚಿಸಿದ್ದಾರೆ. ಎಲ್ಲ ನಾಯಕರ ಬಳಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಾವೆಲ್ಲ ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಸಾಗುತ್ತೇವೆ ‘ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ಸಮಾವೇಶದಲ್ಲಿ ಕೆಲವು ಅವ್ಯವಸ್ಥೆ ಆಗಿದ್ದು, ಶಿವಕುಮಾರ್ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಬೇರೆಯವರಿಂದ ಅದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದಾಗ, ‘ ಈ ಯಾತ್ರೆಯಲ್ಲಿ ಎಲ್ಲರೂ ಶಕ್ತಿಮೀರಿ ಶ್ರಮಿಸಿದ್ದಾರೆ. ಎಲ್ಲರೂ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಸುರೇಶ್ ಆಗಲು ಸಾಧ್ಯವಿಲ್ಲ. ಎಲ್ಲರೂ ಶಕ್ತಿಮೀರಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ನಮ್ಮ ಯೂತ್ ಕಾಂಗ್ರೆಸ್ ಅಧ್ಯಕ್ಷರು ಯಾತ್ರೆ ಸಾಗಿದ ನಂತರ ಬಿದ್ದಿದ್ದ ಕಸವನ್ನು ಎತ್ತಿ ಹಾಕಿದ್ದಾರೆ. ಪಕ್ಷ ಕಟ್ಟುವ, ಜನ ಸಂಘಟಿಸುವ ಹಾಗೂ ಕಸ ಎತ್ತುವ ಕೆಲಸ ಮಾಡಿದ್ದಾರೆ. ನಾನು ಯಾರ ಶ್ರಮವನ್ನೂ ಅಲ್ಲಗೆಳೆಯುವುದಿಲ್ಲ. ಎಲ್ಲರ ಸಹಕಾರ, ಪರಿಶ್ರಮದಿಂದ ಯಾತ್ರೆ ಯಶಸ್ವಿಯಾಗಿದೆ ‘ ಎಂದು ತಿಳಿಸಿದರು.

ನಿಮ್ಮ ಶಾಸಕರು ನಿಮ್ಮ ನಿರೀಕ್ಷೆಗೆ ತಕ್ಕಂತೆ ನೀವು ಕೊಟ್ಟ ಕೆಲಸ ನಿಭಾಯಿಸಿದ್ದಾರಾ ಎಂದು ಕೇಳಿದಾಗ, ‘ ಈ ಬಗ್ಗೆ ಲಿಖಿತ ರೂಪದಲ್ಲಿ ಎಲ್ಲರಿಂದ ವರದಿ ಪಡೆಯುತ್ತೇನೆ ‘ ಎಂದು ಹೇಳಿದರು.

ಕಷ್ಟ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿದ ಬಗ್ಗೆ ಕೇಳಿದಾಗ, ‘ ಈ ಬಗ್ಗೆ ಮಾಧ್ಯಮದವರು ನನಗೆ ವಿಚಾರ ತಿಳಿಸಿದ್ದಾರೆ. ಮಾಧ್ಯಮಗಳಲ್ಲಿ ಸೋಮಣ್ಣ ಅವರು ಕ್ಷಮಾಪಣೆ ಕೇಳಿದ್ದಾರೆ ಎಂಬ ವರದಿ ಬಂದಿದೆ. ಈ ವಿಚಾರವನ್ನು ಸಂಪೂರ್ಣವಾಗಿ ತಿಳಿದ ನಂತರ ನಾನು ಮಾತನಾಡುತ್ತೇನೆ ‘ ಎಂದು ಶಿವಕುಮಾರ್ ಹೇಳಿದರು.

Join Whatsapp
Exit mobile version