ಬೆಂಗಳೂರು:ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗುತ್ತೆ ಎಂದ ಬಿಜೆಪಿ ನಾಯಕರ ಹೇಳಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿವಾಳಿ ಆಗಿರುವುದು ನಿಮ್ಮ ಬುದ್ಧಿಯೇ ಹೊರತು ನಮ್ಮ ರಾಜ್ಯವಲ್ಲ.ಸುಳ್ಳುಗಳನ್ನೇ ಸೃಷ್ಟಿಸುತ್ತಾ ನಿಮ್ಮನ್ನು ನೀವೇ ಬೆತ್ತಲೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ದಿನಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. ಆ ಸುಳ್ಳು ಬಯಲಾದಾಗ ಸಮರ್ಥಿಸಲು ಇನ್ನೊಂದಷ್ಟು ಸುಳ್ಳು ಹೇಳುತ್ತಾರೆ ಎಂದು ಕಿಡಿ ಕಾರಿದರು.
ಸುಳ್ಳುಗಳನ್ನು ಸೃಷ್ಟಿಸುತ್ತಾ ನಿಮ್ಮನ್ನ ನೀವೇ ಬೆತ್ತಲೆ ಮಾಡಿಕೊಳ್ಳಬೇಡಿ. ಹತ್ತು ಸಾವಿರ ಕೋಟಿ ಸಾಲ ಮಾಡಿದ್ದ ಕಾರಣಕ್ಕೆ ರಾಜ್ಯ ದಿವಾಳಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ನಿಮ್ಮ ಸರ್ಕಾರದ ಕಾಲದಲ್ಲಿನ ಸಾಲದ ಲೆಕ್ಕವನ್ನು ಪರಿಶೀಲಿಸಿದ್ದರೆ ಈ ರೀತಿ ನಮ್ಮ ಕೈಗೆ ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿರಲಿಲ್ಲ ಎಂದು ಸಿಎಂ ಕಿಡಿಗಾರಿದ್ದಾರೆ.
ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗ ಮಾಡಿದ್ದ ಸಾಲ 84,528 ಕೋಟಿ ರೂಪಾಯಿ. 2020-21 ರ ಹಣಕಾಸು ವರ್ಷದಲ್ಲಿ ಮಾಡಿದ್ದ ಸಾಲ 84,528 ಕೋಟಿ ರೂಪಾಯಿ. ಬೊಮ್ಮಾಯಿ 2021-22 ರಲ್ಲಿ 67, 320 ಕೋಟಿ ರೂಪಾಯಿ ಸಾಲ ಮಾಡಿದ್ದರು. 2022-23ರ ಅವಧಿಯಲ್ಲಿ 72,000 ಕೋಟಿ ರೂಪಾಯಿ ಸಾಲ ಮಾಡಿದ್ದರು. ಆ ಸಾಲ ತೀರಿಸಲು 2022-23 ರಲ್ಲಿ 43,580 ಕೋಟಿ ರೂಪಾಯಿ ಬಳಕೆ ಮಾಡಿಕೊಳ್ಳಲಾಗಿದೆ. ಈಗ ಆ ಸಾಲವನ್ನು ನಾವು ತೀರಿಸಬೇಕಾಗಿದೆ ಎಂದು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಮೇಲೆ ಆರೋಪ ಮಾಡುವ ಮುನ್ನ ಬಸವರಾಜ ಬೊಮ್ಮಾಯಿ ಅವರನ್ನು ಕೇಳಬೇಕಲ್ಲವೇ ಎಂದು ಬಿಜೆಪಿ ನಸಯಕರನ್ನು ಪ್ರಶ್ನಿಸಿದರು.