‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ’ : ಡಿಕೆಶಿ ಹೇಳಿಕೆಗೆ ಬೊಮ್ಮಾಯಿ ತಿರುಗೇಟು

Prasthutha|

ಬೆಂಗಳೂರು: ನಮ್ಮ ಲಕ್ಷ್ಯ ಕೊರೋನಾ ನಿಯಂತ್ರಣ ಮಾಡುವುದರಲ್ಲಿ ಇರಬೇಕೇ ಹೊರತು ಪ್ರತಿ ವಿಚಾರದಲ್ಲಿ ಕೊರೋನಾ ಸಮಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

- Advertisement -

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಇದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷದ ಅಧ್ಯಕ್ಷರಾಗಿ ಹೀಗೆಲ್ಲ ಮಾತನಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಎಲ್ಲಾ ರಾಜ್ಯದ ರಾಜ್ಯಪಾಲರು ಸಭೆ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯಪಾಲರ ಆಳ್ವಿಕೆ ಎನ್ನುವುದು ಸರಿಯಲ್ಲ. ಇವತ್ತು ರಾಜ್ಯಪಾಲರ ಸಭೆ ಇದೆ. ಇಂದಿನ ಸಭೆಯಲ್ಲಿ ವಿಪಕ್ಷಗಳ ನಾಯಕರು, ಸಿಎಂ ಅವರು ಭಾಗವಹಿಸುತ್ತಾರೆ. ಈ ಸಭೆಯಲ್ಲಿ 144 ಸೆಕ್ಷನ್ ಸೇರಿದಂತೆ ಎಲ್ಲಾ ವಿಚಾರ ಚರ್ಚೆ ಆಗುತ್ತದೆ. ಚರ್ಚೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ರಾಜಸ್ಥಾನದಲ್ಲಿಯೂ ರಾಜ್ಯಪಾಲರು ಸಭೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಅಲ್ಲಿಯೂ ರಾಜ್ಯಪಾಲರು ಸಭೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ರಾಜ್ಯಪಾಲರ ಆಳ್ವಿಕೆ ಎನ್ನಲಾಗುತ್ತದೆಯೇ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಡಿಕೆ ಶಿವಕುಮಾರ್ ಮಾಡಬಾರದು. ಸರ್ಕಾರ ಕೊರೋನಾ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ಈ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದೆ. ಪ್ರತಿಯೊಂದರಲ್ಲೂ ವಿಪಕ್ಷಗಳು ರಾಜಕೀಯ ಮಾಡಬಾರದು ಎಂದು ಕಾಂಗ್ರೆಸ್ ವಿರುದ್ದ ಸಚಿವ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಸೋಂಕು ವೇಗವಾಗಿ ಪಸರಿಸುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಬೆಂಗಳೂರಿನಲ್ಲಿ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಸಾವಿರಾರು ಮಂದಿಗೆ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ ಇದ್ದರೂ ಆಕ್ಸಿಜನ್ ಸಮಸ್ಯೆಯಿದೆ. ಈಗಾಗಲೇ ಆಕ್ಸಿಜನ್ ತಯಾರಿಕಾ ಕಂಪನಿಗಳ ಜೊತೆ ಸರ್ಕಾರದ ಜೊತೆ ನಾನು, ಸಚಿವ ಜಗದೀಶ್ ಶೆಟ್ಟರ್, ಸುಧಾಕರ್ ಎಲ್ಲರೂ ಮಾತನಾಡಿದ್ದೇವೆ. ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೊರೋನಾ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಸೇರಿ ಕೆಲಸ ಮಾಡುವ ಸಮಯವಿದು. ವಿಪಕ್ಷಗಳು ಕೇವಲ ತಪ್ಪುಗಳು ಕಂಡು ಹಿಡಿಯುವುದಲ್ಲ. ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಇದರಲ್ಲಿ ಯಾರೂ ಸಹ ರಾಜಕಾರಣ ಮಾಡುವುದು ಬೇಡ ಎಂದು ವಿಪಕ್ಷ ಕಾಂಗ್ರೆಸ್ ಗೆ ಬೊಮ್ಮಾಯಿ ತಿರುಗೇಟು ನೀಡಿದರು.



Join Whatsapp