ಉಡುಪಿ: ಹೊಸ ಸರ್ಕಾರ ಎರಡು ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಕಾನೂನು ಹಿಂಪಡೆಯುವ ದುಸ್ಸಾಹಸವನ್ನು ಮಾಡಬೇಡಿ ಎಂದು ಉಡುಪಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ. ಅದನ್ನು ಗಮನಿಸಿಕೊಂಡು ತೀರ್ಮಾನ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪೇಜಾವರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಮತಾಂತರದಿಂದ ಹಲವಾರು ಕುಟುಂಬಗಳು ಛಿದ್ರವಾಗಿವೆ
ಹಿಂದಿನ ಸರ್ಕಾರ ಸಮಾಜದಲ್ಲಿದ್ದ ಎರಡು ಗೊಂದಲಗಳನ್ನು ಪರಿಹರಿಸಲು ಕಾಯ್ದೆ ತಂದಿತ್ತು. ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಗೊಂದಲ ನಿವಾರಿಸಿತ್ತು. ಮತಾಂತರದಿಂದ ಹಲವಾರು ಕುಟುಂಬಗಳು ಛಿದ್ರವಾದದ್ದನ್ನು ನಾವು ಕಂಡಿದ್ದೆವು. ಗಂಡ ಹೆಂಡತಿ, ತಾಯಿ ಮಕ್ಕಳ ವೈಮನಸ್ಸಿಗೆ ಮತಾಂತರ ಕಾರಣವಾಗಿತ್ತು.
ಹೆಣ್ಮಕ್ಕಳು ಹಸು ಕಟ್ಟಿ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಕಳ್ಳಕಾಕರು ತಲ್ವಾರು ಝಳಪಿಸಿ ಹಸು ಕದ್ದೊಯ್ಯೋದು ಹೆಚ್ಚಾಯ್ತು. ಹಸು ಸಾಕುವ ಮಹಿಳೆಯರಿಗೆ ಆಸರೆ ಇಲ್ಲದಂತಾಗುತ್ತಿತ್ತು. ಇಂತಹ ಸಮಸ್ಯೆಯನ್ನು ಗಮನಿಸಿ ಹಿಂದಿನ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತು ಎಂದು ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಸಿಎಂ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಿದ್ದರು.
1964 ಕಾಯ್ದೆ ಪ್ರಕಾರ, 12 ವರ್ಷಗಳ ಕಾಲ ದುಡಿದು ವಯಸ್ಸಾದ ರಾಸುಗಳನ್ನು, ಕೃಷಿ ಚಟುವಟಿಕೆಗಳಿಗೆ ಅಯೋಗ್ಯವೆನಿಸುವ ಮತ್ತು ನಿಷ್ಪ್ರಯೋಜಕ ದನಕರುಗಳನ್ನು ವಧೆ ಮಾಡಬಹುದಾಗಿದೆ, ಸುಮಾರು 6 ದಶಕಗಳಿಂದ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅದನ್ನು ತಿದ್ದುಪಡಿ ಮಾಡಿದೆ ಎಂದಿದ್ದರು.