Home ಟಾಪ್ ಸುದ್ದಿಗಳು ನನ್ನ ಉತ್ಸವ ಮಾಡೋದು ಬೇಡ, ಕಾಂಗ್ರೆಸ್, ದೇಶದ ಉತ್ಸವ ಮಾಡಬೇಕು: ಡಿ.ಕೆ. ಶಿವಕುಮಾರ್

ನನ್ನ ಉತ್ಸವ ಮಾಡೋದು ಬೇಡ, ಕಾಂಗ್ರೆಸ್, ದೇಶದ ಉತ್ಸವ ಮಾಡಬೇಕು: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ನನಗೆ ಯಾವ ಉತ್ಸವವೂ ಬೇಡ. ನನಗೆ ಕಾಂಗ್ರೆಸ್ ಹಾಗೂ ದೇಶದ ಉತ್ಸವ ಬೇಕು. ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು. ಅದೇ ನನ್ನ ಗುರಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ , ‘ಅಭಿಮಾನಿಗಳು ಅಭಿಮಾನದಿಂದ ಏನು ಮಾತನಾಡುತ್ತಾರೋ ಅದು ನನಗೆ ಬೇಡ. ನನ್ನ ಹುಟ್ಟುಹಬ್ಬದ ಸಮಯದಲ್ಲಿ ಅಭಿಮಾನಿಗಳು ಜಾಹೀರಾತು ನೀಡುತ್ತೇವೆ ಎಂದಾಗಲೂ ಬೇಡ ಎಂದಿದ್ದೆ. ನನ್ನ ಕುಟುಂಬದ ಸಮೇತ ಕೇದಾರನಾಥಕ್ಕೆ ಹೋಗಿ ಅಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಬಂದೆ. ಬೇರೆಯವರ ಹೇಳಿಕೆ ಅಭಿಮಾನದ ವಿಚಾರ ಅಷ್ಟೆ. ನಾನು ಅಧ್ಯಕ್ಷನಾಗಿ ಅಧಿಕಾರ ತೆಗೆದುಕೊಂಡ ದಿನವೇ, ಯಾರೂ ಕೂಡ ನನ್ನ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಹೇಳಿದ್ದೆ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅಭಿಮಾನಿಗಳು ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.

ಈ ವಿಚಾರ ವಿರೋಧ ಪಕ್ಷಗಳಿಗೆ ಆಹಾರವಾಗುವುದಿಲ್ಲವೆ ಎಂಬ ಪ್ರಶ್ನೆಗೆ, ‘ ಮಾಧ್ಯಮಗಳಿಗೂ ಇದೇ ಆಹಾರ ಬೇಕು. ಅದಕ್ಕಾಗಿ ನನ್ನನ್ನು ಬಂದು ಈ ವಿಚಾರವಾಗಿ ಕೇಳುತ್ತಿದ್ದೀರಿ’ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನೆಗೆ, ‘ ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾನು ಈ ಸಭೆಯಲ್ಲಿ ಭಾಗವಹಿಸುವುದಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ನನನ್ನು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಇಂದು ಕಾಂಗ್ರೆಸ್ ಕಚೇರಿಯಲ್ಲಿ ದೇಶದ 75ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮ ಕುರಿತು ಪೂರ್ವಭಾವಿ ಸಭೆ ನಡೆಸುತ್ತಿದ್ದು, ಅಲ್ಲಿಗೆ ಹೋಗುತ್ತೇನೆ ‘ ಎಂದು ಉತ್ತರಿಸಿದರು.

ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ‘ ನನಗೆ ಆ ವಿಚಾರದ ಬಗ್ಗೆ ಗೊತ್ತಿಲ್ಲ. ಅವರು ವೈಯಕ್ತಿಕ ವಿಚಾರವಾಗಿ ಭೇಟಿ ನೀಡಿದ್ದಾರೋ ಅಥವಾ ರಾಜಕೀಯ ವಿಚಾರವಾಗಿ ಭೇಟಿ ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ. ಶಾಸಕರು ಬೇರೆ ಪಕ್ಷಗಳ ನಾಯಕರನ್ನು ಭೇಟಿ ಮಾಡುವುದು ಸಹಜ. ಹಿರಿಯ ನಾಯಕರಿಗೆ ಗೌರವ ಸಲ್ಲಿಸಲು ಹೋಗಿರಬಹುದು ‘ ಎಂದರು.

ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಇರುವುದಿಲ್ಲ ಎಂಬ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಅವರು 10 ವರ್ಷಗಳ ನಂತರವಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಂತೋಷವಾಗಿದೆ. ಸೋಲನ್ನು ಅವರು ಈಗಲೇ ಒಪ್ಪಿಕೊಳ್ಳುತ್ತಿದ್ದಾರಲ್ಲ, ಅಷ್ಟೇ ಸಾಕು ‘ ಎಂದು ತಿರುಗೇಟು ನೀಡಿದರು.

Join Whatsapp
Exit mobile version