Home ಟಾಪ್ ಸುದ್ದಿಗಳು ನಾಮಕಾವಸ್ಥೆ ಕುರ್ಚಿ ಉಳಿಸಿಕೊಳ್ಳಲು ಸಚಿವರಾಗುವುದು ಬೇಡ: ಎಂ.ಪಿ.ರೇಣುಕಾಚಾರ್ಯ

ನಾಮಕಾವಸ್ಥೆ ಕುರ್ಚಿ ಉಳಿಸಿಕೊಳ್ಳಲು ಸಚಿವರಾಗುವುದು ಬೇಡ: ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು: ಕೇವಲ ನಾಮಾಕವಸ್ಥೆ ಹಾಗೂ ಕುರ್ಚಿ ಉಳಿಸಿಕೊಳ್ಳುವ ಬದಲು ಪಕ್ಷ, ಸರ್ಕಾರ ಮತ್ತು ಸಂಘಟನೆಗೆ ಹೆಸರು ತರುವಂತಹ ಕೆಲಸಗಳನ್ನು ಸಚಿವರು ಮಾಡಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.


ಸಚಿವರಾದವರು ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಂಚರಿಸಿ ಪಕ್ಷ , ಸರ್ಕಾರ ಹಾಗೂ ಸಂಘಟನೆಗೆ ಹೆಸರು ತರುವ ಕೆಲಸ ಮಾಡಬೇಕು. ಕೇವಲ ಕುರ್ಚಿ ಮತ್ತು ಸ್ವಾರ್ಥ ಮುಖ್ಯವಾಗಬಾರದೆಂದು ಚಾಟಿ ಬೀಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿರುವ ಕೆಲವು ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಪಕ್ಷ ಸಂಘಟನೆ, ಪ್ರತಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ಕೊಡಬೇಕು. ಆದರೆ ಕೆಲವು ಸಚಿವ ಕಾರ್ಯವೈಖರಿ ಸಮಾಧಾನ ತಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.


ಸಂಪುಟ ಎಂದ ಮೇಲೆ ಕೇವಲ ಮುಖ್ಯಮಂತ್ರಿಗಳು ಮಾತ್ರ ಜವಾಬ್ದಾರರು ಆಗಿರುವುದಿಲ್ಲ. ಅದಕ್ಕೆ ಸಚಿವರು ಸಹ ಜವಾಬ್ದಾರರು. ಇದರಲ್ಲಿ ಎಲ್ಲರ ಕರ್ತವ್ಯವೂ ಕೂಡ ಇರುತ್ತದೆ. ಪ್ರತಿಪಕ್ಷಗಳ ಆರೋಪಕ್ಕೆ ಕೆಲವರು ಏಕೆ ಉತ್ತರ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಾಮಕಾವಸ್ಥೆ ಸಚಿವರಾಗುವುದರಲ್ಲಿ ಅರ್ಥವಿಲ್ಲ. ಜಿಲ್ಲೆಯಿಂದ ಹಿಡಿದು ತಾಲ್ಲೂಕು, ಹೋಬಳಿ ಮಟ್ಟದವರೆಗೂ ಓಡಾಡಿ ಕಾರ್ಯಕರ್ತರನ್ನು ಭೇಟಿ ಮಾಡಿ ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂದು ಹೇಳಿದರು.


ಕೇವಲ ಜಿಲ್ಲಾ ಮಟ್ಟ ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು. ಈ ಹಿಂದೆ ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಅಬಕಾರಿ ಸಚಿವನಾಗಿದ್ದೆ. ವಿಧಾನಸೌಧದಿಂದ ಹಿಡಿದು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದವರೆಗೂ ಕೆಲಸ ಮಾಡಿದ್ದೇನೆ. ಹಾಲಿ ಸಚಿವರು ಮುಖ್ಯಮಂತ್ರಿಗಳ ವೇಗಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರ, ಸಂಘಟನೆಗೆ ಬಲ ಬರುತ್ತದೆ ಎಂದು ತಿಳಿಸಿದರು.


ಅವಕಾಶ ಕೊಡಬೇಕಿತ್ತು: ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇದ್ದು, ಹೊಸಬರಿಗೆ ಮುಖ್ಯಮಂತ್ರಿಗಳು ಅವಕಾಶ ಕೊಡಬೇಕಿತ್ತು. ಕೆಲವು ಸಚಿವರ ಬಳಿ ಹೆಚ್ಚುವರಿ ಖಾತೆಗಳಿವೆ. ಇವುಗಳನ್ನೇ ಕೆಲವು ಶಾಸಕರಿಗೆ ನೀಡಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದರು.

ಕೇವಲ ನನಗೆ ಮಾತ್ರ ಸಚಿವ ಸ್ಥಾನ ಕೊಡಬೇಕಿತ್ತೆಂದು ನಾನು ಕೇಳುವುದಿಲ್ಲ. ಚುನಾವಣೆಗೆ ಒಂದು ವರ್ಷ ಬಾಕಿಯಿದೆ. ಸಂಪುಟಕ್ಕೆ ಸೇರ್ಪಡೆಯಾದರೆ ಇಲಾಖೆಯನ್ನು ತಿಳಿದುಕೊಳ್ಳಲು ಹಲವು ತಿಂಗಳುಗಳೇ ಬೇಕಾಗುತ್ತದೆ. ಅದಿಕಾರಿಗಳ ಪರಿಶೀಲನಾ ಸಭೆ, ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಸಭೆಗಳನ್ನು ಮಾಡಬೇಕು. ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಬೇರೆಯವರ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ಹಿಂಪಡೆದು ಹೊಸಬರಿಗೆ ನೀಡಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ಸರ್ಕಾರ ಮತ್ತು ಸಂಘಟನೆಗೆ ಹೆಸರು ಬರುತ್ತಿತ್ತು. ಮುಖ್ಯಮಂತ್ರಿಗಳು ಏಕೆ ವಿಳಂಬ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಇಷ್ಟೊಂದುವ ವಿಳಂಬ ಮಾಡುವುದರಲ್ಲಿ ಅರ್ಥವೂ ಇಲ್ಲ ಎಂದರು.


ಕಡೆಪಕ್ಷ ಚುನಾವಣಾ ದೃಷ್ಟಿಯಿಂದಲಾದರೂ ಸಂಪುಟ ವಿಸ್ತರಣೆ ಮಾಡಲೇಬೇಕಿತ್ತು. ಇದು ಕೇವಲ ನನ್ನೊಬ್ಬನ ಅಭಿಪ್ರಾಯವಲ್ಲ. ಅನೇಕ ಶಾಸಕರ ಅಭಿಪ್ರಾಯವಾಗಿದೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಕಾರಿ. ವರಿಷ್ಠರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ: ಇದೇ ವೇಳೆ ರೇಣುಕಾಚಾರ್ಯ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ:

ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನೇ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್ ನಾಯಕರು. ನಮ್ಮ ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ಆರೋಪಗಳು ಇಲ್ಲದಿರುವುದರಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಹಲಾಲ್, ಹಿಜಾಬ್, ಹುಬ್ಬಳ್ಳಿ ಗಲಭೆಯನ್ನು ಸೃಷ್ಟಿಸಿದವರೇ ಕಾಂಗ್ರೆಸಿಗರು. ಬಿಜೆಪಿ ವಿರುದ್ಧ ಮಾತನಾಡಲು ಯಾವ ಅಸ್ತ್ರಗಳು ಇಲ್ಲದಿರುವುದರಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ, ಗುತ್ತಿಗೆದಾರರ ಸಂಘದ ಆರೋಪ ಇವೆಲ್ಲವೂ ತನಿಖೆಯಿಂದ ಹೊರಬೀಳಲಿದೆ. ಪ್ರಧಾನಿಗೆ ಗುತ್ತಿಗೆದಾರರ ಸಂಘದ ಪದಾಕಾರಿಗಲು ದೂರು ನೀಡಲು ಅದರ ಕರಡು ಸಿದ್ದವಾಗಿದ್ದೇ ಕಾಂಗ್ರೆಸ್ ನಾಯಕರ ಮನೆಯಲ್ಲಿ. ಇದರ ಎಲ್ಲ ಕಿಂಗ್ಪಿ್ನ್ ಗಳು ಕಾಂಗ್ರೆಸ್ನರವರೇ. ತನಿಖೆ ನಡೆದ ಮೇಲೆ ಕಾಂಗ್ರೆಸ್ಗರ ಬಣ್ಣ ಬಯಲಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.

Join Whatsapp
Exit mobile version