Home ಕರಾವಳಿ ಮಂಗಳೂರು | ಯಾವುದೇ ಕಾರಣಕ್ಕೂ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ: ವೇದವ್ಯಾಸ ಕಾಮತ್

ಮಂಗಳೂರು | ಯಾವುದೇ ಕಾರಣಕ್ಕೂ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ: ವೇದವ್ಯಾಸ ಕಾಮತ್

►ಬೇರೆ ಕಾಲೇಜಿಗೆ ಹೋಗುವುದಾದರೆ ವ್ಯವಸ್ಥೆ ಮಾಡುತ್ತೇನೆ ಎಂದ ಶಾಸಕ

ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಬಹುದು, ತರಗತಿ, ಲೈಬ್ರೆರಿಯಲ್ಲಿ ಧರಿಸುವಂತಿಲ್ಲ

ಮಂಗಳೂರು: ಸೋಮವಾರದಿಂದ ನೂರಕ್ಕೆ ನೂರು ಕೋರ್ಟ್ ಆದೇಶ ಪಾಲಿಸಬೇಕು. ಯಾವುದೇ ಕಾರಣಕ್ಕೂ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿನಿಯರು ವಿಶ್ರಾಂತಿ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ತರಗತಿಗೆ ಹೋಗಲಿ. ಜೊತೆಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡುವ ಕೆಲಸ ಕುಲಪತಿಯವರು ಮಾಡುತ್ತಾರೆ. ಬೇರೆ ಕಾಲೇಜಿಗೆ ಹೋಗುವುದಾದರೆ ವ್ಯವಸ್ಥೆ ಮಾಡುತ್ತೇನೆ. ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅನ್ವಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆ ತಪ್ಪಲ್ಲ, ಅದು ಪ್ರಜಾಪ್ರಭುತ್ವದ ಹಕ್ಕು. ಕೋರ್ಟ್ ಆದೇಶ ಪಾಲಿಸದ ಕಾರಣಕ್ಕೆ ಅವರು ಇಲ್ಲಿ ಪ್ರತಿಭಟನೆ ಮಾಡಿದ್ದಾರೆ. ಪದವಿ ಕಾಲೇಜುಗಳಿಗೆ ಕೋರ್ಟ್ ಆದೇಶ ಅನ್ವಯ ಆಗುತ್ತದೆಯೇ ಎನ್ನುವ ಪ್ರಶ್ನೆ ಇದೆ. ಆದರೆ ಕೋರ್ಟ್ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುನಿವರ್ಸಿಟಿ ಗೆ ಅನ್ವಯ ಆಗುವುದರಿಂದ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೆ ಅನ್ವಯ ಆಗುತ್ತದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ, ಸಿಡಿಸಿ ಸಭೆಯಲ್ಲಿ ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶ ಇಲ್ಲ. ಕಾಲೇಜು ಕ್ಯಾಂಪಸ್ ಗೆ ಹಿಜಾಬ್ ಹಾಕಿಕೊಂಡು ಬರಬಹುದು. ತರಗತಿ, ಲೈಬ್ರೆರಿ ಸೇರಿ ಯಾವುದೇ ತರಗತಿಗೆ ಹಾಕಲು ಅವಕಾಶ ಇಲ್ಲ. ಆದರೆ ಅದನ್ನು ಪ್ರತ್ಯೇಕ ಕೊಠಡಿಯಲ್ಲಿ ಕಳಚಿಟ್ಟು ತರಗತಿಗೆ ಬರಬೇಕು ಎಂದರು.
ಕೋರ್ಟ್ ಆದೇಶ ಬಳಿಕ ಪರೀಕ್ಷಾ ಪ್ರಕ್ರಿಯೆ ಇದ್ದ ಹಿನ್ನೆಲೆ ಮಾರ್ಗಸೂಚಿ ತಡವಾಗಿತ್ತು. ಆ ಬಳಿಕ ಸಿಂಡಿಕೇಟ್ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

Join Whatsapp
Exit mobile version