ವಾಷಿಂಗ್ಟನ್ : ಕೋವಿಡ್ ವೈರಸ್ ಸಾಂಕ್ರಾಮಿಕತೆಯಿಂದ ಭಾರತ ಧ್ವಂಸಗೊಂಡಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಕೋವಿಡ್ ಸೋಂಕನ್ನು ಜಾಗತಿಕವಾಗಿ ಹರಡಿದ್ದಕ್ಕೆ ಅಮೆರಿಕಕ್ಕೆ ಚೀನಾ ಹತ್ತು ಟ್ರಿಲಿಯನ್ ಡಾಲರ್ ಪಾವತಿಸಬೇಕಾಗಿದೆ ಎಂದೂ ಅವರು ಹೇಳಿದ್ದಾರೆ. ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.
ಪರಿಹಾರದ ಮೊತ್ತ ಅದಕ್ಕಿಂತಲೂ ಇನ್ನೂ ಹೆಚ್ಚಿದೆ. ಆದಾಗ್ಯೂ, ಜಗತ್ತಿನಾದ್ಯಂತ ಇನ್ನೂ ಹೆಚ್ಚಿನದ್ದನ್ನು ಅವರು ಪಾವತಿಸಬೇಕಿದೆ. ಅವರು ಮಾಡಿದ್ದುದರಿಂದ, ದೇಶಗಳು ನಾಶಗೊಂಡಿವೆ. ನಾನು ಇದೊಂದು ಆಕಸ್ಮಿಕ ಅಂದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ನಮ್ಮ ದೇಶವೇ ಅತ್ಯಂತ ಹೀನಾಯವಾಗಿ ಬಳಲಿದೆ. ಇನ್ನೂ ಹಲವು ದೇಶಗಳು ಇನ್ನೂ ತೀವ್ರ ನಷ್ಟಕ್ಕೊಳಗಾಗಿವೆ ಎಂದು ತಿಳಿಸಿದ ಅವರು, ಭಾರತವನ್ನು ಉಲ್ಲೇಖಿಸಿ ಮಾತನಾಡುತ್ತಾ, ಇಂತಹ ದೇಶಗಳ ಸಾರ್ವಜನಿಕ ಆರೋಗ್ಯ ದುರಂತಮಯವಾಗಿದೆ ಎಂದಿದ್ದಾರೆ. ಈಗ ಭಾರತದ ವಿಷಯವನ್ನೇ ನೋಡಿ. ಭಾರತ ಎಷ್ಟು ಚೆನ್ನಾಗಿ ನಿರ್ವಹಿಸುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಭಾರತ ಈಗ ಧ್ವಂಸಗೊಂಡಿದೆ ಮತ್ತು ಪ್ರತಿಯೊಂದು ದೇಶವೂ ಈಗ ಹೆಚ್ಚುಕಮ್ಮಿ ಧ್ವಂಸಗೊಂಡಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.