Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ಸರಕಾರದ ವೈದ್ಯಕೀಯ ನೀತಿ ವಿರೋಧಿಸಿ ನಾಳೆ ವೈದ್ಯರ ಮುಷ್ಕರ | ಒಪಿಡಿ ಬಂದ್

ಪ್ರಧಾನಿ ಮೋದಿ ಸರಕಾರದ ವೈದ್ಯಕೀಯ ನೀತಿ ವಿರೋಧಿಸಿ ನಾಳೆ ವೈದ್ಯರ ಮುಷ್ಕರ | ಒಪಿಡಿ ಬಂದ್

ಮೈಸೂರು : ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರಗಳಿಗೆ ಈಗ ಸರಣಿ ಪ್ರತಿಭಟನೆ ಎದುರಿಸುವ ಅನಿವಾರ್ಯ ಸೃಷ್ಟಿಯಾಗಿದೆ. ಈಗಾಗಲೇ ರೈತರು ಕೇಂದ್ರ ಸರಕಾರದ ವಿರುದ್ಧ ಕಳೆದ 15 ದಿನಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರೆ, ರಾಜ್ಯ ಸರಕಾರದ ವಿರುದ್ಧ ಮರಾಠ ಅಭಿವೃದ್ಧಿ ನಿಗಮ, ಕೃಷಿ ನೀತಿ, ಕೆಎಸ್ ಆರ್ ಟಿಸಿ ಸಿಬ್ಬಂದಿ ಪ್ರತಿಭಟನೆ ಸೇರಿದಂತೆ ಹಲವು ಪ್ರತಿಭಟನೆಗಳು ನಡೆದಿವೆ. ಈಗ ಆಯುರ್ವೇದ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಮಿಶ್ರಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಿರ್ಧಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ನಾಳೆ ಮುಷ್ಕರಕ್ಕೆ ಕರೆ ನೀಡಿದೆ.

ತುರ್ತು ಮತ್ತು ಕೋವಿಡ್ ಚಿಕಿತ್ಸೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸೇವೆಗಳಿಂದ ದೂರು ಉಳಿಯಲು ವೈದ್ಯರು ನಿರ್ಧರಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ವೈದ್ಯರು ಬುಧವಾರ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ಸರಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಸ್ನಾತಕೋತ್ತರ ಆಯುರ್ವೇದದ ಶಾಲ್ಯ ಮತ್ತು ಶಾಲಕ್ಯ ವಿಭಾಗದವರು 58 ಶಸ್ತ್ರ ಚಿಕಿತ್ಸೆ ಮಾಡಲು ಅನುಮತಿ ನೀಡುವ ಮೂಲಕ ಸರಕಾರ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಐಎಂಎ ಮೈಸೂರು ಘಟಕ ಅಧ್ಯಕ್ಷ ಡಾ. ಬಿ.ಎನ್. ಆನಂದ್ ರವಿ ತಿಳಿಸಿದ್ದಾರೆ.

ಅಲೋಪಥಿ ವಿಧಾನದಲ್ಲೂ ಎಂಬಿಬಿಎಸ್ ಮಾತ್ರ ಮಾಡಿದವರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶವಿಲ್ಲ. ಮಾಸ್ಟರ್ ಆಫ್ ಸರ್ಜರಿ ಮಾಡಿದವರು ಸಹ ಎಲ್ಲಾ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಈಗ ಆಯುರ್ವೇದದವರಿಗೆ ಅವಕಾಶ ನೀಡಿದರೆ ಜನರ ಜೀವದ ಗತಿ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ಐಎಂಎ ಕೇಂದ್ರೀಯ ಸಮಿತಿ ಸದಸ್ಯ ಡಾ. ಎಸ್.ಪಿ. ಯೋಗಣ್ಣ, ಆಲ್ ಇಂಡಿಯಾ ಸರ್ಜಿಕಲ್ ಸೊಸೈಟಿ ಅಧ್ಯಕ್ಷ ಡಾ. ಸಿದ್ದೇಶ್, ಡಾ. ಜಾವೇದ್ ನಯೀಂ, ಡಾ. ಚಂದ್ರಬಾನ್ ಸಿಂಗ್, ಡಾ. ಪಿ. ರಾಜನ್, ಡಾ. ಪ್ರಸನ್ನಶಂಕರ್ ಈ ವೇಳೆ ಉಪಸ್ಥಿತರಿದ್ದರು.   

Join Whatsapp
Exit mobile version