ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರೆ ಸಲ್ಲಿಕೆ ಮಾಡಿದ್ದು, ಈ ವೇಳೆ ತಮ್ಮ ಆಸ್ತಿಯ ವಿವರಗಳನ್ನು ಘೋಷಣೆ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಅವರ ಸ್ಥಿರಾಸ್ತಿ, ಚರಾಸ್ತಿ ಒಟ್ಟು ಮೌಲ್ಯ 1214 ಕೋಟಿ ರೂಪಾಯಿ ಇದ್ದು, ಪತ್ನಿ ಆಸ್ತಿ ಮೌಲ್ಯ 153.30 ಕೋಟಿ ರೂಪಾಯಿ ಹಾಗೂ ಅವಿಭಜಿತ ಕುಟುಂಬದ ಆಸ್ತಿ 61 ಕೋಟಿ ರೂಪಾಯಿ ಇದೆ.
ಡಿಕೆ ಶಿವಕುಮಾರ್ ಅವರ ಬಳಿ ₹970 ಕೋಟಿಯಷ್ಟು ಸ್ಥಿರಾಸ್ತಿ, ₹244 ಕೋಟಿ ಚರಾಸ್ತಿ ಇದ್ದು, ₹226 ಕೋಟಿ ಸಾಲವನ್ನೂ ಹೊಂದಿದ್ದಾರೆ. ಡಿಕೆಶಿ ಬಳಿ ₹23 ಲಕ್ಷ ಮೌಲ್ಯದ ಯೂಬ್ಲೆಟ್ ವಾಚ್ ಸಹ ಇದ್ದು, ಅವರು ಸದ್ಯ ವರ್ಷಕ್ಕೆ ₹14 ಕೋಟಿಯಷ್ಟು ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರಲ್ಲಿ 4 ಕೆ.ಜಿ. ಯಷ್ಟು ಬಂಗಾರದ ಸಂಗ್ರಹವೂ ಇದೆ. ರಾಜ್ಯದ ವಿವಿಧೆಡೆ ಕೃಷಿ, ಕೃಷಿಯೇತರ ಜಮೀನು, ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.
ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬವು ಸದ್ಯ ₹189.27 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದೆ. ಕುಮಾರಸ್ವಾಮಿ–ಅನಿತಾ ದಂಪತಿ ಒಟ್ಟಾಗಿ ₹92.84 ಕೋಟಿ ಮೊತ್ತದ ಸ್ಥಿರಾಸ್ತಿ ಹಾಗೂ ₹96.43 ಕೋಟಿ ಮೊತ್ತದ ಚರಾಸ್ತಿಯನ್ನು ಹೊಂದಿದ್ದಾರೆ.
ಒಟ್ಟು 4.130 ಕೆ.ಜಿ. ಚಿನ್ನ ಹಾಗೂ 29 ಕೆ.ಜಿ. ಬೆಳ್ಳಿ, 54 ಕ್ಯಾರಟ್ನಷ್ಟು ವಜ್ರವಿದೆ. ಕುಮಾರಸ್ವಾಮಿ ಹೆಸರಿನಲ್ಲಿ ಟ್ರ್ಯಾಕ್ಟರ್ ಮಾತ್ರ ಇದೆ. ಅವರ ಪತ್ನಿ ಬಳಿ ಇನೋವಾ ಕ್ರಿಸ್ಟ ಹಾಗೂ ಎಂಟು ಮಾರುತಿ ಎಕೋ ಕಾರುಗಳಿವೆ. ಹೆಚ್ ಡಿ ಕುಮಾರಸ್ವಾಮಿ 48 ಎಕರೆಗೂ ಹೆಚ್ಚು ಕೃಷಿ ಜಮೀನು ಹೊಂದಿದ್ದಾರೆ.