ನವದೆಹಲಿ: ಶಿವಸೇನೆ ಪಕ್ಷದ ಮೇಲಿನ ನಿಯಂತ್ರಣಕ್ಕಾಗಿ ಉದ್ಧವ್ ಠಾಕ್ರೆ ತಂಡ ಹಾಗೂ ಏಕನಾಥ ಶಿಂಧೆ ತಂಡಗಳ ನಡುವಿನ ಕಾನೂನು ಹೋರಾಟಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ವಿರಾಮ ನೀಡಿದೆ.
ಈ ವಿಷಯದ ಬಗೆಗಿನ ಅರ್ಜಿಗಳ ಸರಿಯಾದ ವಿಚಾರಣೆಗೆ ಒಂದು ಪೀಠ ರಚಿಸಲು ಒಂದಷ್ಟು ಸಮಯ ಹಿಡಿಯುತ್ತದೆ ಎಂದು ಸಿಜೆಐ ಹೇಳಿದರು.
ಮಂಗಳವಾರ ಶಾಸಕರ ಅನರ್ಹತೆ ಮೊದಲಾದ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಬೇಡಿ. ಆ ಬಗೆಗಿನ ಅರ್ಜಿಗಳು ವಿಚಾರಣೆಯಾಗಬೇಕಾಗಿವೆ ಎಂದು ಸೋಮವಾರ ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರ ವಿಧಾನ ಸಭೆಯ ಸ್ಪೀಕರ್ ರಾಹುಲ್ ನಾರ್ವೆಕರ್ ರಿಗೆ ಆದೇಶಿಸಿತು.
ಸರಿಯಾದ ವಿಚಾರಣೆಗೆ ಒಂದು ಬೆಂಚ್ ರಚಿಸಲು ಒಂದಷ್ಟು ಸಮಯ ಹಿಡಿಯುತ್ತದೆ ಎಂದು ಸಿಜೆಐ ಎನ್. ವಿ. ರಮಣ ಹೇಳಿದರು.
ಮುಖ್ಯ ನ್ಯಾಯಾಧೀಶರಾದ ರಮಣ, ಜಸ್ಟಿಸ್ ಕೃಷ್ಣ ಮುರಾರಿ, ಜಸ್ಟಿಸ್ ಹಿಮಾ ಕೊಹ್ಲಿ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯ ಪೀಠವು ಉದ್ಧವ್ ಬಣದ ಹಲವು ಅರ್ಜಿಗಳ ವಿಚಾರಣೆಯ ವೇಳೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ರಿಗೆ ಮೇಲಿನಂತೆ ಹೇಳಿದರು.
“ಅರ್ಜಿಗಳನ್ನು ವಿಚಾರಣೆಗೆ ಜುಲೈ 11ರಂದು ಪಟ್ಟಿ ಮಾಡಲಾಗಿತ್ತು. ಕೋರ್ಟಿನಲ್ಲಿ ಅನರ್ಹತೆ ಪ್ರಶ್ನೆ ತೀರ್ಮಾನ ಆಗುವವರೆಗೆ ವಿಧಾನಾಂಗವು ಆ ವಿಚಾರ ಎತ್ತಿಕೊಳ್ಳಬಾರದು ಎಂದು ನಾನು ಕೋರ್ಟಿಗೆ ತಿಳಿಸಿದೆ.” ಎಂದು ಕಪಿಲ್ ಸಿಬಲ್ ಅವರು ಈ ಹಿಂದೆ ಸುಪ್ರೀಂ ಕೋರ್ಟ್ ಬಂಡಾಯ ಶಾಸಕರಿಗೆ ರಕ್ಷಣೆ ನೀಡಿತ್ತು ಎಂದು ಒತ್ತಿ ಹೇಳಿದರು.
”ಮಿಸ್ಟರ್ ಮೆಹ್ತಾ, ನೀವು ಸ್ಪೀಕರ್ ರಿಗೆ ಈ ಬಗೆಗಿನ ಯಾವುದೇ ಕಾರ್ಯ ನಿರ್ವಹಿಸದಂತೆ ತಿಳಿಸಿರಿ. ಮುಂದೆ ನೋಡೋಣ, ನಾವು ವಿಷಯವನ್ನು ಆಲಿಸಲಿದ್ದೇವೆ” ಎಂದು ರಾಜ್ಯಪಾಲರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾರಿಗೆ ಪೀಠ ಹೇಳಿತು.
ಜುಲೈ 3 ಮತ್ತು 4ರಂದು ತರಾತುರಿಯಲ್ಲಿ ವಿಧಾನ ಸಭೆ ಕರೆದುದರ ಬದ್ಧತೆಯನ್ನು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ. ಅದರಲ್ಲಿ ಸಭಾಪತಿಯನ್ನು ಆರಿಸಿ, ಶಿಂಧೆ ಬಣವು ಬಹುಮತ ಪಡೆದು ರಾತೋ ರಾತ್ರಿ ಸರಕಾರ ರಚಿಸಿದೆ ಎಂದು ಆರೋಪಿಸಲಾಗಿದೆ.
ಜೂನ್ 27ರಂದು ಶಾಸಕರ ಅನರ್ಹತೆ ವಿಚಾರವನ್ನು ಸುಪ್ರೀಂ ಕೋರ್ಟ್ ಜು. 11ರವರೆಗೆ ತಡೆಹಿಡಿದಿತ್ತು. ಅಲ್ಲದೆ ಅನರ್ಹಗೊಳಿಸುವ ಕಾನೂನು ಬದ್ಧತೆಯ ವಿಚಾರವನ್ನು ಸರಕಾರ ಮತ್ತು ಸಂಬಂಧಿಸಿದವರಿಂದ ಮಾಹಿತಿ ಕೇಳಿತ್ತು.